ಕರ್ನಾಟಕ

ಮುಖ್ಯಮಂತ್ರಿಯಾಗುವ ಆಸೆಯಿಂದ ಕುಂದಗೋಳದಲ್ಲಿ ’50 ಕೋಟಿ’ ಡಿಕೆಶಿ ಹೂಡಿಕೆ: ರೇಣುಕಾಚಾರ್ಯ

Pinterest LinkedIn Tumblr


ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗಳ ನಡುವೆಯೇ, ಕಾಂಗ್ರೆಸ್ ಹಲವು ನಾಯಕರು ಸಿಎಂ ರೇಸ್‍ಗೆ ಇಳಿದಿದ್ದಾರೆ. ಇತ್ತ ಇದೇ ವೇಳೆ ಸಚಿವ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಎಂಬಿ ಪಾಟೀಲ್ ನಡುವೆ ಸಿಎಂ ಕುರ್ಚಿಗಾಗಿ ರೇಸ್ ನಡೆಯುತ್ತಿದೆ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವಿನ ಅಂತರಿಕ ಕಚ್ಚಾಟ ಹೆಚ್ಚಾಗಲಿದ್ದು, ಒಂದೊಮ್ಮೆ ಸಿಎಂ ಆಗುವ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಸೈಡ್ ಮಾಡಿ ಡಿಕೆ ಶಿವಕುಮಾರ್ ಕುರ್ಚಿ ಪಡೆಯಲಿದ್ದಾರಾ ಎಂಬ ಅನುಮಾನ ರೇಣುಕಾಚಾರ್ಯ ಅವರ ಹೇಳಿಕೆಯಿಂದ ಮೂಡಿದೆ.

ಕ್ಷೇತ್ರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಂದಗೋಳ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಸಚಿವ ಡಿಕೆ ಶಿವಕುಮಾರ್ ಅವರು 50 ಕೋಟಿ ರೂ. ಹೂಡಿಕೆ ಮಾಡುತ್ತಿದ್ದಾರೆ. ಮತದಾರರಿಗೆ ಹಣ ಹಂಚಿಕೆ ಮಾಡಲು ಬೆಂಗಳೂರಿನಿಂದ 500 ಮಂದಿಯನ್ನು ಬಿಟ್ಟಿದ್ದಾರೆ ಎಂದು ರೇಣುಕಾಚಾರ್ಯ ಆರೋಪ ಮಾಡಿದ್ದಾರೆ.

ಭ್ರಷ್ಟಾಚಾರ ನಡೆಸಿದ ಹಣವನ್ನು ಇಲ್ಲಿ ಖರ್ಚು ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಪ್ರತಿ ಪಂಚಾಯಿತಿಯ ಜವಾಬ್ದಾರಿಯನ್ನ ಪಕ್ಷದ ಶಾಸಕರಿಗೆ ನೀಡಿದ್ದು, ಪ್ರತಿ ಪಂಚಾಯಿತಿ ವ್ಯಾಪ್ತಿಗೆ ಇಷ್ಟು ಕೋಟಿ ರೂ. ಖರ್ಚು ಮಾಡಬೇಕು. ನಾನು ಸಿಎಂ ಆದರೆ ನಿಮಗೆ ಈ ಸಚಿವ ಸ್ಥಾನ ನೀಡುತ್ತೇನೆ ಎಂದು ಆಮಿಷ ಒಡ್ಡಿದ್ದಾರೆ. ಆದ್ದರಿಂದ ಈ ಮಟ್ಟದಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾರೆ. ಆದರೆ ನಮಗೆ ಜನರ ಬೆಂಬಲ ಇದ್ದು, ನಮ್ಮ ಅಭ್ಯರ್ಥಿಯನ್ನು ಜನ ಗೆಲ್ಲಿಸಿಕೊಡುತ್ತಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇತ್ತ ಸಚಿವ ಡಿಕೆ ಶಿವಕುಮಾರ್ ಅವರು ಕೂಡ ನಾನು ಸನ್ಯಾಸಿ ಅಲ್ಲ, ನನಗೂ ಸಿಎಂ ಆಗುವ ಆಸೆ ಇದೆ ಎಂದು ಹೇಳಿದ್ದರು. ಈ ಹೇಳಿಕೆ ರೇಣುಕಾಚಾರ್ಯ ಅವರ ಆರೋಪಕ್ಕೆ ಪುಷ್ಠಿ ನೀಡುತ್ತಿದೆ. ಆದರೆ ಇಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಡಿಕೆ ಶಿವಕುಮಾರ್ ಅವರು, ನನಗೆ ಸಿಎಂ ಆಗುವ ಆಸೆ ಇದೆ ಎಂದು ಹೇಳಿದ್ದು ಸತ್ಯ. ಆದರೆ ಈಗ ನಮ್ಮ ಪಕ್ಷ ಕುಮಾರಸ್ವಾಮಿ ಅವರನ್ನು 5 ವರ್ಷ ಸಿಎಂ ಎಂದು ನಿರ್ಧರಿಸಿದೆ. ಆದ್ದರಿಂದ ನಾನು ಮುಂದಿನ ಅವಧಿಯಲ್ಲಿ ಎಂದು ಹೇಳಿದ್ದೆ. ನಮ್ಮ ಸರ್ಕಾರದಲ್ಲಿ ಯಾವುದೇ ಬದಲಾವಣೆ ಆಗಲ್ಲ, ಸಮ್ಮಿಶ್ರ ಸರ್ಕಾರ ಬಲಿಷ್ಠವಾಗಿ 5 ವರ್ಷ ಪೂರೈಸುತ್ತದೆ ಎಂದು ಹೇಳಿದರು.

Comments are closed.