ರಾಷ್ಟ್ರೀಯ

ಉಗ್ರರ ಸೆದೆಬಡಿಯಲು ಚುನಾವಣಾ ಆಯೋಗದ ಅನುಮತಿಗೆ ಕಾಯಬೇಕಾ?: ಮೋದಿ

Pinterest LinkedIn Tumblr


ಉತ್ತರ ಪ್ರದೇಶ: ಇವತ್ತು ಜಮ್ಮು-ಕಾಶ್ಮೀರದ ಶೋಪಿಯನ್​ನಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆಗೈದ ಘಟನೆಯನ್ನು ಮೋದಿ ತಮ್ಮ ಚುನಾವಣಾ ಭಾಷಣದಲ್ಲಿ ಎದುರಾಳಿಗಳನ್ನ ಕುಟುಕಲು ಬಳಕೆ ಮಾಡಿದರು. ಸೈನಿಕರು ಭಯೋತ್ಪಾದಕರನ್ನು ಕೊಲ್ಲಲು ಚುನಾವಣಾ ಆಯೋಗದ ಅನುಮತಿಗಾಗಿ ಕಾಯಬೇಕಾ ಎಂದು ಉತ್ತರ ಪ್ರದೇಶದ ಕುಶಿನಗರದಲ್ಲಿ ಜನಸ್ತೋಮವನ್ನುದ್ದೇಶಿಸಿ ಪ್ರಧಾನಿ ಮೋದಿ ಪ್ರಶ್ನೆ ಮಾಡಿದರು.

“ಭಯೋತ್ಪಾದಕರು ಬಾಂಬು ಮತ್ತು ಗನ್ನುಗಳನ್ನ ಹಿಡಿದು ಸೈನಿಕರ ಎದುರು ನಿಂತಿರುತ್ತಾರೆ. ಆಗ ಆ ಉಗ್ರರ ಮೇಲೆ ಶೂಟ್ ಮಾಡಲು ಸೈನಿಕರು ಚುನಾವಣಾ ಆಯೋಗದ ಅನುಮತಿಗಾಗಿ ಕಾದುಕೊಂಡು ಕೂತಿರಬೇಕಾ? ನಾನು ಕಾಶ್ಮೀರಕ್ಕೆ ಬಂದಾಗಿನಿಂದ ಪ್ರತೀ ಎರಡು ಮೂರು ದಿನಕ್ಕೊಮ್ಮೆ ಸ್ವಚ್ಛ ಕಾರ್ಯಾಚರಣೆ ನಡೆಯುತ್ತಿದೆ. ಇದು ನನ್ನ ಕ್ಲೀನಪ್ ಆಪರೇಷನ್” ಎಂದು ಮೋದಿ ಹೇಳಿಕೊಂಡರು.

ಇದಕ್ಕೂ ಮುನ್ನ, ಮಧ್ಯಪ್ರದೇಶದ ಖಂಡವಾದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ಹಿಂದೂ ಭಯೋತ್ಪಾದನೆ ಪದ ಹುಟ್ಟುಹಾಕಿದ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

“ನಮ್ಮ ಧಾರ್ಮಿಕ ಪರಂಪರೆಯನ್ನು ಅವಹೇಳನ ಮಾಡಲು ಕಾಂಗ್ರೆಸ್ ಪಕ್ಷ ಹಿಂದೂ ಆತಂಕವಾದ ಎಂಬ ಪದ ಬಳಸಿತು. ಅವರು ಎಷ್ಟೇ ಜನಿವಾರ ತೋರಿಸಿದರೂ ಕಾಂಗ್ರೆಸ್ ಹಾಗೂ ಅದರ ಕಲಬೆರಕೆಯ ಮಿತ್ರರು ಹಿಂದೂ ಧರ್ಮದ ಕೇಸರಿ ಬಣ್ಣಕ್ಕೆ ಭಯೋತ್ಪಾದನೆಯ ಕಪ್ಪುಚುಕ್ಕೆ ಹಾಕಿದ ಪಾಪದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ” ಎಂದು ಕೆಂಡಕಾರಿದರು.

ಇಲ್ಲಿ ಜನಿವಾರ ಪದ ಬಳಕೆಯನ್ನು ಅವರು ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಬಳಕೆ ಮಾಡಿ ಟೀಕಿಸಿದ್ದಾರೆ. ರಾಹುಲ್ ಗಾಂಧಿ ಈ ಹಿಂದೆ ತಾನು ಜನಿವಾರ ಧರಿಸಿದ ಬ್ರಾಹ್ಮಣ ಎಂದು ಹೇಳಿಕೊಂಡಿದ್ದರು.

ಇದೇ ವೇಳೆ, ಮೋದಿ ಅವರು 1984ರ ಸಿಖ್ ವಿರೋಧಿ ದಂಗೆ ಕೃತ್ಯದ ಬಗ್ಗೆ ಸ್ಯಾಮ್ ಪಿತ್ರೋಡ ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಉಲ್ಲೇಖಿಸಿ ಟೀಕಾಸ್ತ್ರ ಹರಿಬಿಟ್ಟರು.

“ಆಗಿದ್ದು ಆಗಿ ಹೋಯ್ತು ಎನ್ನುವ ಧೋರಣೆಯಲ್ಲಿ ಕಾಂಗ್ರೆಸ್ ಪಕ್ಷವು ಭೋಪಾಲ್ ಗ್ಯಾಸ್ ದುರಂತದ ಆರೋಪಿ(ವಾರೆನ್ ಆ್ಯಂಡರ್ಸನ್)ಯನ್ನು ತಪ್ಪಿಸಿಕೊಳ್ಳಲು ಬಿಟ್ಟರು…. ತುರ್ತು ಪರಿಸ್ಥಿತಿಯಲ್ಲಿ ಕಿಶೋರ್ ಕುಮಾರ್ ಹಾಡುಗಳನ್ನು ನಿಷೇಧಿಸಲಾಯಿತು. ಈಗ ಅದರ ಬಗ್ಗೆ ಕಾಂಗ್ರೆಸ್ಸನ್ನು ಕೇಳಿದರೆ ಆಗಿದ್ದು ಆಗಿ ಹೋಯಿತು ಎಂದು ಹೇಳುತ್ತಾರೆ” ಎಂದು ಮೋದಿ ಟೀಕಿಸಿದರು.

ಹಾಗೆಯೇ, ಪ್ರಧಾನಿ ಮೋದಿ ಅವರು ತಾನೊಬ್ಬ ಬಡತನದ ಕುಟುಂಬದಿಂದ ಬಂದವನಾಗಿದ್ದು, ಯಾವುದೇ ಜಾತಿಗೆ ಸೇರಿದವನಲ್ಲ ಎಂದು ಹೇಳಿ ತಮ್ಮ ಹಿಂದುಳಿದ ಜಾತಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದರು.

Comments are closed.