ರಾಷ್ಟ್ರೀಯ

ಭಾರತದಲ್ಲಿ ತನ್ನ ಪ್ರಾಂತ್ಯ ಸ್ಥಾಪಿಸಿಕೊಂಡಿರುವುದಾಗಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಐಸಿಸ್‌ (ISIS) ಹೇಳಿಕೆ

Pinterest LinkedIn Tumblr


ಹೊಸದಿಲ್ಲಿ/ಶ್ರೀನಗರ : ಭಾರತದಲ್ಲಿ ತಾನು ತನ್ನ ಆಧಿಪತ್ಯದ ಪ್ರಾಂತ್ಯವನ್ನು ಸ್ಥಾಪಿಸಿಕೊಂಡಿರುವುದಾಗಿ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಐಸಿಸ್‌ (ISIS) ಇದೇ ಮೊದಲ ಬಾರಿಗೆ ಹೇಳಿಕೊಂಡಿದೆ.

ಐಸಿಸ್‌ ಉಗ್ರ ಸಂಘಟನೆಯ ಈ ಹೇಳಿಕೆಯನ್ನು ಅದರದ್ದೇ ಸುದ್ದಿ ಸಂಸ್ಥೆಯಾಗಿರುವ ಅಮಾಕ್‌ ನ್ಯೂಸ್‌ ನಿನ್ನೆ ಶುಕ್ರವಾರ ತಡ ರಾತ್ರಿ ಪ್ರಕಟಿಸಿದೆ.

ಭಾರತದಲ್ಲಿ ತಾನು ಸ್ಥಾಪಿಸಿರುವ ತನ್ನ ಆದಿಪಥ್ಯದ ನೂತನ ಪ್ರಾಂತ್ಯದ ಹೆಸರು ‘ವಿಲಾಯಾಹ್‌ ಆಫ್ ಹಿಂದ್‌’ ಎಂದು ಅದು ಘೋಷಿಸಿಕೊಂಡಿದೆ.

ಈ ಪ್ರಾಂತ್ಯ ಸ್ಥಾಪನೆಯ ನಿಟ್ಟಿನಲ್ಲಿ ತಾನು ಜಮ್ಮು ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿನ ಆಂಶೀಪೋರಾ ಪಟ್ಟಣದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಿ ಅದಕ್ಕೆ ಭಾರೀ ಜೀವ ಹಾನಿ ಉಂಟುಮಾಡಿದ್ದೇನೆ ಎಂದು ಐಸಿಸ್‌ ಉಗ್ರ ಸಂಘಟನೆ ಕೊಚ್ಚಿಕೊಂಡಿದೆ.

ವಾಸ್ತವದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ನಿನ್ನೆ ಶುಕ್ರವಾರ ಶೋಪಿಯಾನ್‌ ಜಿಲ್ಲೆಯಲ್ಲಿ ನಡೆಸಿದ್ದ ಎನ್‌ಕೌಂಟರ್‌ನಲ್ಲಿ ಐಸಿಸ್‌ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿದ್ದನೆನ್ನಲಾದ ಇಶ್‌ಫಾಕ್‌ ಅಹ್ಮದ್‌ ಸೋಫಿ ಎಂಬ ಉಗ್ರನನ್ನುಗುಂಡಿಕ್ಕಿ ಸಾಯಿಸಿತ್ತು. ಆ ಬಳಿಕದಲ್ಲಿ ಐಸಿಸ್‌ ಉಗ್ರ ಸಂಘಟನೆಯಿಂದ “ವಾಲಿಯಾಹ್‌ ಆಫ್ ಹಿಂದ್‌’ ಪ್ರಾಂತ್ಯ ಸ್ಥಾಪನೆಯ ಹೇಳಿಕೆ ಹೊರಟು ಬಂದಿದೆ !

ಇರಾಕ್‌ ಮತ್ತು ಸಿರಿಯಾದಲ್ಲಿನ ತನ್ನ ನೆಲೆ ಹಾಗೂ ಖಲೀಫ‌ತ್‌ ನಾಶಗೊಂಡ ಬಳಿಕದಲ್ಲಿ ತನ್ನ ಅಸ್ತಿತ್ವ ಇನ್ನೂ ಪೂರ್ತಿಯಾಗಿ ಅಳಿದಿಲ್ಲ ಎಂಬುದನ್ನು ಹೇಗಾದರೂ ಜಗತ್ತಿಗೆ ಸಾರುವ ಕುಟಿಲೋಪಾಯದಲ್ಲಿ ಐಸಿಸ್‌ ಉಗ್ರ ಸಂಘಟನೆ ಜಮ್ಮು ಕಾಶ್ಮೀರದಲ್ಲಿ ತನ್ನ ಆಧಿಪತ್ಯದ ಪ್ರಾಂತ್ಯವೊಂದನ್ನು ತಾನು ಸ್ಥಾಪಿಸಿಕೊಂಡಿದ್ದೇನೆ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿರುವುದು ಗಮನಾರ್ಹವಾಗಿದೆ.

ಐಸಿಸ್‌ ಉಗ್ರ ಸಂಘಟನೆ ಶ್ರೀಲಂಕಾದಲ್ಲಿ ಈಚೆಗೆ ಈಸ್ಟರ್‌ ಭಾನುವಾರದಂದು ಆತ್ಮಾಹುತಿ ಬಾಂಬ್‌ ದಾಳಿ ನಡೆಸಿ 253 ಮಂದಿಯನ್ನು ಬಲಿತೆಗೆದುಕೊಂಡ ರೀತಿಯಲ್ಲಿ “ಹಿಟ್‌ ಆ್ಯಂಡ್‌ ರನ್‌‌’ ಆತ್ಮಾಹುತಿ ದಾಳಿಗಳನ್ನು ಭಾರತ, ಬಾಂಗ್ಲಾದೇಶದಲ್ಲಿ ನಡೆಸುವ ಯೋಜನೆ ಹೊಂದಿರುವುದಾಗಿ ಗುಪ್ತಚರ ದಳ ಈಚೆಗಷ್ಟೇ ಮುನ್ನೆಚ್ಚರಿಕೆ ನೀಡಿದೆ.

Comments are closed.