
ನವದೆಹಲಿ: ಇವಿಎಂ ಸಮಸ್ಯೆಗೆ ಮುಕ್ತಿ ಕಾಣಿಸಲು ಕೊನೆಗೂ ಕೇಂದ್ರ ವಿರೋಧ ಪಕ್ಷಗಳು ಒಂದಾಗಿವೆ ಎನ್ನುವುದು ಗೊತ್ತಿರುವ ಸಂಗತಿ. ಈ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸುವಂತೆ ಕೇಂದ್ರ ಚುನಾವಣ ಆಯೋಗಕ್ಕೆ ಕಾಂಗ್ರೆಸ್ ನೇತೃತ್ವದಲ್ಲಿ 21 ವಿರೋಧ ಪಕ್ಷಗಳು ಆಗ್ರಹಿಸಿದ್ದವು ಕೂಡ. ಬಳಿಕ ಸುಪ್ರೀಂ ಕೋರ್ಟ್ನಲ್ಲಿಯೂ ಮೇಲ್ಮನವಿ ಸಲ್ಲಿಸಿದ್ದವು. ಆದರೆ, ಸುಪ್ರೀಂಕೋರ್ಟ್ ಈ ವಿಚಾರಕ್ಕೆ ಮನ್ನಣೆ ನೀಡದೆ, ಅರ್ಜಿಯನ್ನು ತಿರಸ್ಕರಿಸಿತು. ನೇರವಾಗಿಯೇ ಕೇಂದ್ರ ವಿಪಕ್ಷಗಳ ಬ್ಯಾಲೆಟ್ ಪೇಪರ್ ಬಳಕೆ ಮಾಡಿ ಎಂಬ ಬೇಡಿಕೆಯನ್ನು ತಳ್ಳಿಹಾಕಿತ್ತು.
ಲೋಕಸಭಾ ಚುನಾವಣೆ ಮುಗಿಯಲು ಇನ್ನೆರಡು ಹಂತದ ಮತದಾನ ಮಾತ್ರ ಬಾಕಿಯಿದೆ. ಈ ಮಧ್ಯೆ ಮತ್ತೆ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ತಾಂತ್ರಿಕ ದೋಷದ ಕುರಿತಾದ ಚರ್ಚೆ ಮುನ್ನೆಲೆಗೆ ಬಂದಿದೆ. ಮೊದಲ ಹಂತದ ಚುನಾವಣೆಯಲ್ಲಿ ಆಂಧ್ರಪ್ರದೇಶ, ಮಹಾರಾಷ್ಟ್ರ, ಜಮ್ಮ-ಕಾಶ್ಮೀರದಲ್ಲಿ ಇವಿಎಂ ಯಂತ್ರ ಕೈಕೊಟ್ಟಿತ್ತು. ಸುಮಾರು 350ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಆರೋಪಿಸಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದರು. ಜತೆಗೆ ಮರುಮತದಾನಕ್ಕೆ ಕೂಡ ಆಗ್ರಹಿಸಿದರು.
ಈ ಬೆನ್ನಲ್ಲೇ ಎನ್ಸಿಪಿ ಹಿರಿಯ ನಾಯಕ ಶರದ್ ಪವಾರ್ ಅವರು, ಎವಿಎಂ ಬಗ್ಗೆ ಮತ್ತೊಂದು ಆರೋಪ ಮಾಡಿದ್ದಾರೆ. ಹೈದರಬಾದ್ ಮತ್ತು ಗುಜರಾತ್ನಲ್ಲಿ ಕೆಲವರು ನನ್ನನ್ನು ಇವಿಎಂ ಬಟನ್ ಒತ್ತಲು ಹೇಳಿ, ಪರಿಶೀಲಿಸುವಂತೆ ಕೇಳಿಕೊಂಡರು. ಆಗ ಕೂಡಲೇ ನಾನು ಇವಿಎಂನಲ್ಲಿ ನನ್ನ ಪಕ್ಷ ಎನ್ಸಿಪಿ ಸಿಂಬಲ್ ಬಟನ್ ಒತ್ತಿದೆ. ನಾನು ಎನ್ಸಿಪಿಗೆ ಒತ್ತಿದ್ರೆ, ವೋಟು ಬಿಜೆಪಿಗೆ ಬಿತ್ತು ಎಂದರು. ಹಾಗೆಯೇ ಇಲ್ಲಿನ ಇವಿಎಂ ಯಂತ್ರಗಳು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿವೆ ಎಂದು ಆಂತಕ ವ್ಯಕ್ತಪಡಿಸಿದರು.
ಈ ಹಿಂದೆಯೇ ಕೇಂದ್ರ ಚುನಾವಣೆಯ ಆಯೋಗದಿಂದ ನಿಖರತೆ, ಪಾರದರ್ಶಕತೆ ಮತ್ತು ನಿಸ್ಪಕ್ಷಪಾತ ಚುನಾವಣೆ ನಡೆಸಲು ಇವಿಎಂ ಬಳಸಬೇಡಿ ಎಂದು ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ದೂರು ನೀಡಿದ್ದವು. ಅಲ್ಲದೇ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸುವಂತೆ ಒತ್ತಾಯಿಸಿದ್ದವು.
Comments are closed.