ರಾಷ್ಟ್ರೀಯ

ಕಡಿಮೆ ಅಂಕ ಗಳಿಸಿದ ತನ್ನ ಮಗನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ತಾಯಿ ಪೋಸ್ಟ್‌ಗೆ ಮನಸೋತ ನೆಟ್ಟಿಗರು!

Pinterest LinkedIn Tumblr

ಹೊಸದಿಲ್ಲಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಪೋಷಕರು ತಮ್ಮ ಮಕ್ಕಳು ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಾಕಷ್ಟು ಒತ್ತಡಗಳನ್ನು ಹೇರುತ್ತಾರೆ. ಕಡಿಮೆ ಅಂಕ ಬಂದರೆ ಮನೆಗೆ ಸೇರಿಸುವುದಿಲ್ಲ ಎಂದೆಲ್ಲಾ ಹೆದರಿಸುತ್ತಾರೆ. ಕೆಲವು ವಿದ್ಯಾರ್ಥಿಗಳು ಕಡಿಮೆ ಅಂಕ ಬಂದಿದ್ದಕ್ಕೆ ಹೆದರಿ ಆತ್ಮಹತ್ಯೆಗೆ ಯತ್ನಿಸುವುದಿದೆ.

ಇಂತಹ ಸಮಾಜದ ನಡುವೆ ಮಗನಿಗೆ ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ ಶೇ.60 ಅಂಕ ಗಳಿಸಿದ್ದಕ್ಕೆ ತೃಪ್ತಿಗೊಂಡ ಅಮ್ಮ, ಅತ್ಯಂತ ಖುಷಿಯಿಂದ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. ಇವರ ಉತ್ಸಾಹಕ್ಕೆ ನೆಟ್ಟಿಗರು ಮೆಚ್ಚಿಕೊಂಡು ಲೈಕ್‌ಗಳ ಸುರಿಮಳೆ ಸುರಿಸಿದ್ದಾರೆ.

ದಿಲ್ಲಿಯ ವಂದನ ಕಟೊಚ್‌ ಎಂಬ ತಾಯಿಯೊಬ್ಬರು ತಮ್ಮ ಮಗ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.60 ಅಂಕ ಗಳಿಸಿದ್ದಕ್ಕೆ ಹೆಮ್ಮೆಯಾಗುತ್ತಿದೆ ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅವರ ಪೋಸ್ಟ್‌ ನೋಡಿ……
ಅದ್ಭುತ, ನನ್ನ ಮಗ ಆಮಿರ್‌ ಕ್ಲಾಸ್‌ 10 ಬೋರ್ಡ್‌ ಎಕ್ಸಾಮ್‌ನಲ್ಲಿ ಶೇ.60 ಅಂಕಗಳನ್ನು ಗಳಿಸಿದ್ದಾನೆ. ಹೌದು, ಇದು ಶೇ.90 ಅಂಕ ಅಲ್ಲ, ಆದರೆ ಅದು ನನ್ನ ಭಾವನೆಗಳನ್ನು ಬದಲಿಸುವುದಿಲ್ಲ. ಏಕೆಂದರೆ ನನ್ನ ಮಗ ಕೆಲವು ವಿಷಯಗಳನ್ನು ಅರ್ಥೈಸಿಕೊಳ್ಳಲು ತುಂಬ ಕಷ್ಟ ಪಡುತ್ತಿದ್ದ. ಇದನ್ನು ನಾನು ಗಮನಿಸಿದ್ದೇನೆ. ಆದರೆ ಕೊನೆಯ ತಿಂಗಳಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದಾನೆ. ಅದರ ಫಲವಾಗಿ ಇಷ್ಟು ಅಂಕಗಳು ಬಂದಿವೆ. ಈ ಅಭಿನಂದನೆ ನಿನಗಾಗಿ ಮತ್ತು ನಿನ್ನಂತೆ ಸಾಧರಣ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗಾಗಿ. ಮೀನುಗಳಿಗೆ ಮರ ಹತ್ತಲು ಸಾಧ್ಯವೇ? ಸಾಗರದಲ್ಲೇ ನಿನ್ನ ಏಳ್ಗೆಯನ್ನು ಸಾಧಿಸು ಮಗನೆ. ಒಳ್ಳೆಯತನ, ಆಸಕ್ತಿ ಮತ್ತು ವಿವೇಕದಿಂದ ಜೀವನ ನಡೆಸು ಎಂದು ಹಾರೈಸಿದ್ದಾರೆ.

ಅಮ್ಮನ ಸ್ಪೂರ್ತಿ ತುಂಬುವ ಮಾತುಗಳಿಗೆ ಮನಸೋತಿರುವ ನೆಟ್ಟಿಗರು ಭಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮಕ್ಕಳನ್ನು ಹೇಗೆ ಪ್ರೀತಿಯಿಂದ ಬೆಳೆಸಬೇಕು ಎಂಬುದಕ್ಕೆ ವಂದನಾ ಅವರು ನಿದರ್ಶನ ಎಂದು ಕೊಂಡಾಡುತ್ತಿದ್ದಾರೆ.

Comments are closed.