ರಾಷ್ಟ್ರೀಯ

ಒಡಿಶಾ ಕಡಲ ತೀರಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ; 2 ಬಲಿ, ಬಂಗಾಳದತ್ತ ಧಾವಿಸಿದ ಚಂಡಮಾರುತ

Pinterest LinkedIn Tumblr

ಭುವನೇಶ್ವರ: ಒಡಿಶಾ ಕಡಲ ತೀರಕ್ಕೆ ಇಂದು ಬೆಳಗ್ಗೆ ಅಪ್ಪಳಿಸಿದ ಫೋನಿ ಚಂಡಮಾರುತ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಚಂಡಮಾರುತದಿಂದಾಗಿ ಸೃಷ್ಟಿಯಾದ ವಿವಿಧ ಅವಘಡಗಳಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಪ್ರತೀ ಗಂಟೆಗೆ 200 ಕಿ ಮೀ ವೇಗದಲ್ಲಿ ಬಂದು ಪುರಿ ಕಡಲ ತೀರವನ್ನು ಅಪ್ಪಳಿಸಿದ ಚಂಡಮಾರುತ ಮಧ್ಯಾಹ್ನದವರೆಗೂ ಒಡಿಶಾ ಕರಾವಳಿ ತೀರದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯನ್ನು ಸುರಿಸಿತು. ಇದೀಗ ಚಂಡಮಾರುತದ ಅಬ್ಬರ ಕೊಂಚ ತಗ್ಗಿದ್ದು, ಚಂಡಮಾರುತ ಪಶ್ಚಿಮ ಬಂಗಾಳದತ್ತ ಸಾಗುತ್ತಿದೆ. ಕಡಲ ತೀರಕ್ಕೆ ಒಪ್ಪಳಿಸಿದ ಚಂಡಮಾರುತದ ವೇಗ ಬೆಳಗ್ಗೆ ಪ್ರತೀ ಗಂಟೆಗೆ 245 ಕಿ.ಮೀ ಇತ್ತು. ಇದೀಗ ಚಂಡಮಾರುತದ ವೇಗ ಕಡಿಮೆಯಾಗಿದ್ದು, ಪ್ರತೀ ಗಂಟೆಗೆ ಚಂಡಮಾರುತ 150-160 ವೇಗದಲ್ಲಿ ಬೀಸುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಫೋನಿ ಚಂಡಮಾರುತ ಉತ್ತರ ಮತ್ತು ಈಶಾನ್ಯ ಭಾರತದತ್ತ ಧಾವಿಸುತ್ತಿದ್ದು, ಕಟಕ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ. ನಾಳೆ ಬೆಳಗ್ಗೆ ಫೋನಿ ಚಂಡಮಾರುತ ಪಶ್ಚಿಮ ಬಂಗಾಳ ಪ್ರವೇಶ ಮಾಡುವ ಸಾಧ್ಯತೆ ಇದ್ದು, ಅಲ್ಲಿಯೂ ಭಾರಿ ಬಿರುಗಾಳಿ ಸಹಿತ ಮಳೆ ತರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಂಧ್ರ ಪ್ರದೇಶ ಕರಾವಳಿ ತೀರಾ ಬಿಟ್ಟು ಚಂಡಮಾರುತ ತೆರಳಿರುವುದರಿಂದ ಮಚಲೀಪಟ್ಟಣ ಮತ್ತು ವಿಶಾಖ ಪಟ್ಟಣಂನಲ್ಲಿ ನೀಡಲಾಗಿದ್ದ ಎಚ್ಚರಿಕೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೆ ಆಂಧ್ರ ಮತ್ತು ತೆಲಂಗಾಣ ಕರಾವಳಿಯಲ್ಲಿ ಮಳೆ ಮುಂದುವರೆಯಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.