ನವದೆಹಲಿ: ಬದುಕೋದಕ್ಕೆಂದು ಟೀ ಮಾರುತ್ತಿದ್ದ ಬಿಜೆಪಿಯ ಕಾರ್ಪೊರೇಟರ್ ಓರ್ವನನ್ನು ಉತ್ತರ ದೆಹಲಿಯ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ.
ಅವತಾರ್ ಸಿಂಗ್ ಎಂಬ ವ್ಯಕ್ತಿ ಮೇಯರ್ ಸ್ಥಾನಕ್ಕೆ ಏರುತ್ತಿದ್ದು, ದಲಿತ ಸಿಖ್ ಸಮುದಾಯಕ್ಕೆ ಸೇರಿದ ಓರ್ವ ವ್ಯಕ್ತಿ ದೆಹಲಿಯಲ್ಲಿ ಮೇಯರ್ ಹುದ್ದೆಗೆ ಏರಿದ ಅಪರೂಪದ ಗಳಿಗೆ ಇದೆಂದು ಶ್ಲಾಘಿಸಲಾಗುತ್ತಿದೆ.
ಅವತಾರ್ ಸಿಂಗ್ ಅವರ ಹೆಸರನ್ನು ಉತ್ತರ ದೆಹಲಿ ಮೇಯರ್ ಸ್ಥಾನಕ್ಕೆ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸೂಚಿಸಿದ್ದರು. ಚುನಾವಣೆಯನ್ನು ಉತ್ತರ ದೆಹಲಿ ಪಾಲಿಕೆಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವತಾರ್ ಸಿಂಗ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ದೆಹಲಿ ಬಿಜೆಪಿಯಲ್ಲಿ ಅವತಾರ್ ಸಿಂಗ್ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಲಭಿಸಿದೆ, ಟೀ ಮಾರುತ್ತಿದ್ದ ಅವರು ಇಂದು ಮೇಯರ್ ಹುದ್ದೆಗೆ ಏರಿದ್ದಾರೆ ಎಂದು ದೆಹಲಿ ಬಿಜೆಪಿ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೇಯರ್ ಹುದ್ದೆ ಕಾಲಾವಧಿ ಒಂದು ವರ್ಷ ಆಗಿದ್ದು, ಈ ಅವಧಿಯಲ್ಲಿ ಮೇಯರ್ ಹುದ್ದೆ ಹಿಂದುಳಿದ ಜನಾಂಗಕ್ಕೆ ಮೀಸಲಿರಿಸಿದ್ದ ಕಾರಣ ಅವತಾರ್ ಸಿಂಗ್ಗೆ ಅವಕಾಶ ಒಲಿದುಬಂದಿದೆ ಎನ್ನಲಾಗುತ್ತಿದೆ.
ದೆಹಲಿ ದಕ್ಷಿಣ, ಉತ್ತರ ಹಾಗೂ ಪೂರ್ವದಲ್ಲಿ ಮೇಯರ್ ಆಗಿ ಆಯ್ಕೆಯಾದವರನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಸಂಪರ್ಕಿಸಿ ಶುಭ ಕೋರಿದ್ದಾರೆ.