ರಾಷ್ಟ್ರೀಯ

ಇವಿಎಂ ಬಟನ್​ಗೆ ಸೆಂಟು; ಮತ ಚಲಾಯಿಸಿ ಬಂದವರ ಬೆರಳ ವಾಸನೆ ಪರೀಕ್ಷಿಸುವ ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು

Pinterest LinkedIn Tumblr


ನವದೆಹಲಿ: ಮತದಾರರ ಮೇಲೆ ಒತ್ತಡ ಹಾಕಲು ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಹೊಸ ವಿಧಾನವೊಂದನ್ನು ಹುಡುಕಿರುವಂತಿದೆ. ಇವಿಎಂ ಮೆಷಿನ್​ಗಳಲ್ಲಿನ ಟಿಎಂಸಿ ಪಕ್ಷದ ಗುರುತಿನ ಪಕ್ಕದ ಬಟನ್ ಮೇಲೆ ಸುಗಂಧ ದ್ರವ್ಯ ಎರಚಿ, ಆ ಮೂಲಕ ಮತದಾರರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆನಂದ್ ಬಜಾರ್ ಪತ್ರಿಕಾದಲ್ಲಿ ವರದಿಯೊಂದು ಪ್ರಕಟವಾಗಿದೆ. ಪಶ್ಚಿಮ ಬಂಗಾಳದ ಬೋಲಪುರ್ ಮತ್ತು ಬೀರ್ಭುಮ್ ಕ್ಷೇತ್ರಗಳಲ್ಲಿ ಇಂಥ ಸೆಂಟ್ ತಂತ್ರಗಳನ್ನು ಟಿಎಂಸಿ ಬಳಸುತ್ತಿದೆ ಎನ್ನಲಾಗಿದೆ.

ಮತದಾರರು ಮತ ಚಲಾಯಿಸುವಾಗ ಬಟನ್ ಒತ್ತಬೇಕಾಗುತ್ತದೆ. ಆಗ ಟಿಎಂಸಿ ಗುರುತಿನ ಮುಂದಿರುವ ಬಟನ್ ಒತ್ತಿದರೆ ಮಾತ್ರ ಅವರ ಬೆರಳಿಗೆ ಪರಿಮಳ ತಾಕುತ್ತದೆ. ಆ ಮತದಾರ ಹೊರಗೆ ಬಂದಾಗ ಬೂತ್ ಸಮೀಪ ಇರುವ ಕಾರ್ಯಕರ್ತರು ಅವರ ಬೆರಳನ್ನು ಮೂಸಿ ಸೆಂಟ್ ಇದೆಯಾ ಎಂದು ಪರೀಕ್ಷಿಸುತ್ತಾರೆ. ಹಾಗೆಯೆ, ವೋಟ್ ಹಾಕಲು ಹೋಗುವ ಮುನ್ನ ಮತದಾರನಿಗೆ ಇದೇ ವಿಚಾರ ಮುಂದಿಟ್ಟು ಬೆದರಿಕೆಯನ್ನೂ ಅವರು ಹಾಕುತ್ತಿದ್ಧಾರೆ. ನೀವು ಟಿಎಂಸಿಗೆ ವೋಟ್ ಹಾಕಿದರೆ ನಿಮ್ಮ ಬೆರಳಿನಲ್ಲಿ ಸುಗಂಧ ವಾಸನೆ ಉಳಿಯುತ್ತದೆ. ಇಲ್ಲವಾದರೆ ನೀವು ಟಿಎಂಸಿಗೆ ಮತ ಹಾಕಿಲ್ಲವೆಂದಾಗುತ್ತದೆ ಎಂದು ಪತ್ರಿಕೆಯ ವರದಿಯಲ್ಲಿ ತಿಳಿಸಲಾಗಿದೆ.

ಬಟನ್ ಒತ್ತಿದರೂ ಕೆಲವರ ಬೆರಳಿಗೆ ಸೆಂಟ್ ಮೆತ್ತಿಕೊಂಡಿರಲಿಲ್ಲ. ಆತಂಕ ಮತ್ತು ಭಯದಲ್ಲಿ ಇವರು ಮತಗಟ್ಟೆ ಅಧಿಕಾರಿ ಬಳಿ ದೂರನ್ನೂ ನೀಡಿರುವ ಸಂಗತಿ ಬೆಳಕಿಗೆ ಬಂದಿದೆ.

ಬೀರ್​ಭುಮ್ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ಅತೀವ ಜಿದ್ದಾಜಿದ್ದಿ ನಡೆಯುತ್ತಿದೆ. ನಾನೂರ್ ಎಂಬಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯಾಗಿ 9 ಮಂದಿಗೆ ಗಾಯವಾಗಿತ್ತು. ಟಿಎಂಸಿಯ ಭದ್ರಕೋಟೆಯಾಗಿ ಪರಿವರ್ತಿತವಾಗಿರುವ ಬೀರ್​ಭುಮ್ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶೇ. 87ರಷ್ಟು ಸ್ಥಾನಗಳು ಇಎಂಸಿ ಪಾಲಾಗಿದ್ದವು. ಕಳೆದ ಒಂದು ವರ್ಷದಿಂದ ಬಿಜೆಪಿ ಇಲ್ಲಿ ಸಾಕಷ್ಟು ಬೆಳವಣಿಗೆ ಸಾಧಿಸಿ ಸ್ವಲ್ಪ ಆಳವಾಗಿ ಬೇರೂರಲು ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಬೀರ್​ಭುಲ್ ಕ್ಷೇತ್ರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

Comments are closed.