ಬೆಂಗಳೂರು: ಎಸ್ಎಸ್ಎಲ್ಸಿ ಫಲಿತಾಂಶ ದಿನಾಂಕ ನಿಗದಿಯಾಗಿದೆ. ಏಪ್ರಿಲ್ 30 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಎಸ್ ಎಸ್ ಎಲ್ ಸಿ ಬೋರ್ಡ್ ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಾಗಲಿದೆ. www.kaceb.kar.nic.in ಮತ್ತು www.karresults.nic.in ಫಲಿತಾಂಶ ಪ್ರಕಟವಾಗಲಿದೆ. ಪಾಸಾದ ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮೂಲಕ ಫಲಿತಾಂಶ ಕಳುಹಿಸಲಾಗುವುದು. ಆಯಾ ಶಾಲೆಗಳಲ್ಲಿ ಮರುದಿನ ಫಲಿತಾಂಶ ಪ್ರಕಟವಾಗಲಿದೆ ಎಂದು ನಿರ್ದೇಶಕಿ ವಿ. ಸುಮಂಗಲಾ ತಿಳಿಸಿದ್ದಾರೆ.
ಮಾರ್ಚ್ 21 ರಿಂದ ಏಪ್ರಿಲ್ 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು. ಒಟ್ಟು 8,41,666 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. 2,847 ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. 4,651 ವಿಕಲ ಚೇತನ ಮಕ್ಕಳು ಪರೀಕ್ಷೆ ಬರೆದಿದ್ದರು. 1451 ಅರ್ಹ ವಿಕಲಚೇತನ ವಿದ್ಯಾರ್ಥಿಗಳಿಗೆ ಭಾಷಾ ವಿನಾಯತಿ ನೀಡಲಾಗಿತ್ತು. 480 ಅರ್ಹ ವಿದ್ಯಾರ್ಥಿಗಳಿಗೆ ಗಣಿತ ಹಾಗೂ ವಿಜ್ಞಾನ ವಿಷಯಗಳಿಗೆ ಬದಲಾಗಿ ಪರ್ಯಾಯ ವಿಷಯ ಬರೆಯುವ ಅವಕಾಶ ನೀಡಲಾಗಿತ್ತು.
ಕಳೆದ ವರ್ಷ ರಾಜ್ಯಾದ್ಯಂತ ಶೇ.88.18 ರಷ್ಟು ಎಸ್ಎಸ್ಎಲ್ಸಿ ಫಲಿತಾಂಶ ಬಂದಿತ್ತು, ಉಡುಪಿ ಮೊದಲ ಸ್ಥಾನ ಪಡೆದಿತ್ತು. ಎಸ್ಎಸ್ಎಲ್ಸಿ ಟಾಪರ್ಸ್ಗಳು ಶೇ. 100 ರಷ್ಟು ಅಂಕ ಪಡೆದಿದ್ದರು. 2016 ರಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಎಸ್ಎಸ್ಎಲ್ಸಿ ಫಲಿತಾಂಶ ಶೇ.79.16 ರಷ್ಟು ಇತ್ತು. ಆದರೆ 2017 ರಲ್ಲಿ ಶೇ. 67.87 ಕ್ಕೆ ಕುಸಿದಿತ್ತು. ಉಡುಪಿ ಜಿಲ್ಲೆ 2017 ರಿಂದ ಮೊದಲ ಸ್ಥಾನವನ್ನೇ ಉಳಿಸಿಕೊಂಡು ಬಂದಿದೆ. ಗ್ರಾಮೀಣ ಭಾಗದಲ್ಲಿ ಶೇ.74 ರಷ್ಟು ಫಲಿತಾಂಶ ಬಂದರೆ, ನಗರ ಭಾಗದಲ್ಲಿ ಶೇ.69.38 ರಷ್ಟು ಫಲಿತಾಂಶ ಬಂದಿತ್ತು.
Comments are closed.