ರಾಷ್ಟ್ರೀಯ

ಪ್ರಧಾನಿ ಮೋದಿಯವರ ಈ ಭರವಸೆಯೇ ಬಾಕ್ಸರ್ ವಿಜೇಂದರ್ ಸಿಂಗ್ ಕಾಂಗ್ರೆಸ್ ಸೇರ್ಪಡೆಯಾಗಲು ಕಾರಣವಂತೆ !

Pinterest LinkedIn Tumblr

ನವದೆಹಲಿ: ಬಾಕ್ಸರ್ ವಿಜೇಂದರ್ ಸಿಂಗ್ ಅವರ ಕಾಂಗ್ರೆಸ್ ಸೇರ್ಪಡೆ ವಿಚಾರ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಈ ಹಿಂದೆ 2016ರಲ್ಲಿ ಬಾಕ್ಸಿಂಗ್ ಪಂದ್ಯಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದ ವಿಜೇಂದರ್ ಸಿಂಗ್ ಈಗ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಬಾಕ್ಸರ್​ ವಿಜೇಂದರ್​ ಸಿಂಗ್​ ನಿಕಟ ಸ್ನೇಹ ಹೊಂದಿದ್ದವರು. ಇವರಿಬ್ಬರೂ ತಮ್ಮ ಟ್ವಿಟರ್​ಗಳಲ್ಲಿ ಕೂಡ ಪರಸ್ಪರ ಸ್ನೇಹಪೂರ್ವಕವಾಗಿ ಟ್ವೀಟ್​ ಮಾಡಿಕೊಂಡಿದ್ದರು. ವಿಜೇಂದರ್​ ಸಿಂಗ್​ ಅವರಿಗೆ ಶುಭಾಶಯ ತಿಳಿಸಿ 2016ರಲ್ಲಿ ಕೂಡ ಮೋದಿಯವರು ಟ್ವೀಟ್​ ಮಾಡಿದ್ದರು. ಅಲ್ಲದೆ ತಾವು ಮೋದಿಯವರ ಜತೆಗೆ ಇರುವ ಫೋಟೋವನ್ನು ವಿಜೇಂದರ್​ ಶೇರ್​ ಮಾಡಿಕೊಂಡಿದ್ದರು. ಆದರೆ ಈಗ ಕಾಂಗ್ರೆಸ್​ ಸೇರಿರುವ ವಿಜೇಂದರ್​ ಸಿಂಗ್​, ಪ್ರಧಾನಿ ಮೋದಿಯವರು ತುಂಬ ಸುಳ್ಳು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.

ಇಷ್ಟಕ್ಕೂ ವಿಜೇಂದರ್ ಸಿಂಗ್ ತಾವೇಕೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದೆ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ವಿಜೇಂದರ್ ಸಿಂಗ್, ಪ್ರಧಾನಿ ಮೋದಿ 2014ರ ಲೋಕಸಭಾ ಚುನಾವಣೆಯಲ್ಲಿ ನೀಡಿದ್ದ ಒಂದು ಮಾತು ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಕಾರಣ ಎಂದು ಹೇಳಿದ್ದಾರೆ.

ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿ ಟಿಕೆಟ್​ ಪಡೆದಿರುವ ವಿಜೇಂದರ್​ ಅವರು, ಯಾರನ್ನಾದರೂ ಹೊಗಳುವ ಮುನ್ನ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಅವರ ಮುಖವಾಡದ ಹಿಂದೆ ಬೇರೆಯೇ ಇರುತ್ತದೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿಯವರು 15-20 ಲಕ್ಷ ರೂಪಾಯಿಯನ್ನು ದೇಶದ ಬಡವರ ಖಾತೆಗೆ ಹಾಕುವುದಾಗಿ ಹೇಳಿದ್ದರು. ಇಂದಿಗೂ ಆ ಯುಟ್ಯೂಬ್​ ವಿಡಿಯೋ ನನ್ನ ಬಳಿ ಇದೆ. ಬಡವರು ಅವರನ್ನು ನಂಬಿ ಮತಹಾಕಿದರು. ಆದರೆ ಮೋದಿ ಸುಳ್ಳು ಹೇಳಿದರು. ಭರವಸೆಯನ್ನು ಈಡೇರಿಸಲಿಲ್ಲ. ನನ್ನ ದೃಷ್ಟಿಕೋನ, ವಿಚಾರಧಾರೆಗಳು, ಯೋಚಿಸುವ ವಿಧಾನಗಳೆಲ್ಲ ಕಾಂಗ್ರೆಸ್​ ಪಕ್ಷದ ಸಿದ್ಧಾಂತಗಳೊಂದಿಗೆ ಹೊಂದಿಕೆಯಾಗುತ್ತವೆ. ಕಾಂಗ್ರೆಸ್​ ಜನರನ್ನು ಶಿಕ್ಷಿತರನ್ನಾಗಿ ಮಾಡುತ್ತಿದೆ. ಒಳ್ಳೆ ಮುಖಂಡರನ್ನು ಹೊಂದಿದೆ. ಅವರು ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ಒಳ್ಳೊಳ್ಳೆ ಸಂಗತಿಗಳ ಬಗ್ಗೆ ಮಾತನಾಡುತ್ತಾರೆ. ಇದೇ ಕಾರಣಕ್ಕೆ ಕಾಂಗ್ರೆಸ್​ ಪಕ್ಷಕ್ಕೆ ಸೇರಿದೆ ಎಂದು ವಿಜೇಂದರ್ ಸಿಂಗ್ ಹೇಳಿದ್ದಾರೆ.

Comments are closed.