ನವದೆಹಲಿ: ಶ್ರೀಲಂಕಾ ಬಾಂಬ್ ಸ್ಫೋಟದ ನಂತರ ಭಾರತೀಯ ಕರಾವಳಿ ಭದ್ರತಾ ಪಡೆ ಹೈ ಅಲರ್ಟ್ ಆಗಿದ್ದು, ಉಗ್ರರು ಭಾರತದೊಳಗೆ ನುಸುಳದಂತೆ ಕರಾವಳಿ ಸುತ್ತ ಕಟ್ಟೆಚ್ಚರ ವಹಿಸಿದ್ದಾರೆ.
ಈ ಪೈಶಾಚಿಕ ಕೃತ್ಯದ ಹಿಂದೆ ಸ್ಥಳೀಯ ಇಸ್ಲಾಮಿಕ್ ಉಗ್ರ ಸಂಘಟನೆಯಾದ ನ್ಯಾಷನಲ್ ತೊವೈತ್ ಜಮಾತ್ ಇರಬಹುದು ಎಂದು ಶ್ರೀಲಂಕಾ ಘೋಷಿಸಿದ ನಂತರ ಈ ಬೆಳವಣಿಗೆ ಆಗಿದೆ. ಸರಣಿ ಅತ್ಮಾಹುತಿ ಬಾಂಬ್ ದಾಳಿಯಲ್ಲಿ 300ಕ್ಕೂ ಹೆಚ್ಚು ಜನ ಅಸುನೀಗಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ದಾಳಿಕೋರರು ದ್ವೀಪ ರಾಷ್ಟ್ರದಿಂದ ಸಮುದ್ರ ಮೂಲಕ ಪಲಾಯನಗೈಯ್ಯಬಹುದು ಎಂದು ಕರಾವಳಿಯಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ್ ಸಿರಿಸೇನಾ ಇಂದು ಮಧ್ಯರಾತ್ರಿಯಿಂದ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಉಗ್ರರ ವಿರುದ್ಧ ಕಠಿಣ ಕ್ರಮ ಮತ್ತು ಘಟನೆ ಸಂಬಂಧ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಘೋಷಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.