ರಾಷ್ಟ್ರೀಯ

ಈ ಬಾರಿ ಹೊಸ ಮೈತ್ರಿಕೂಟ ಅಸ್ತಿತ್ವಕ್ಕೆ: ಮಮತಾ ಬ್ಯಾನರ್ಜಿ

Pinterest LinkedIn Tumblr


ನವದೆಹಲಿ: ಈ ಬಾರಿಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಲೋಕಸಭಾ ಕ್ಷೇತ್ರಗಳ ಫಲಿತಾಂಶ ನಿರ್ಣಾಯಕ ಪಾತ್ರ ವಹಿಸಲಿದೆ. ಯುಪಿಎ ಅಥವಾ ಎನ್​ಡಿಎ ಮೈತ್ರಿಕೂಟಗಳು ಅಧಿಕಾರಕ್ಕೆ ಬರುವುದಿಲ್ಲ. ನೂತನ ಸಂಯೋಜನೆಯೊಂದು ಅಧಿಕಾರ ಹಿಡಿಯಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ಧಾರೆ. ನ್ಯೂಸ್18 ನೆಟ್​ವರ್ಕ್​ನ ಪ್ರಧಾನ ಸಂಪಾದಕ ರಾಹುಲ್ ಜೋಷಿ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಪ್ರಾದೇಶಿಕ ಪಕ್ಷಗಳು ಸರಕಾರ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ಹೇಳಿದ್ದಾರೆ.

“ಈ ಬಾರಿ ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಫಲಿತಾಂಶ ಬಹಳ ಮುಖ್ಯವಾಗಲಿದೆ. ಸರಕಾರ ರಚನೆಯಲ್ಲಿ ಈ ಎರಡು ರಾಜ್ಯಗಳು ನಿರ್ಣಾಯಕವಾಗಲಿವೆ. ಪಂಜಾಬ್, ದೆಹಲಿ ಹಾಗೂ ಕೆಲ ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಲಿದೆ. ಆಂಧ್ರ, ಪ್ರದೇಶ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಬಿಜೆಪಿಗೆ ಒಂದೂ ಸೀಟು ದಕ್ಕುವುದಿಲ್ಲ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡದಲ್ಲಿ ಬಿಜೆಪಿಯ ಸ್ಥಾನಗಳು 60ರಿಂದ 40ಕ್ಕೆ ಕುಸಿಯಲಿವೆ. ಬಿಜೆಪಿಗೆ ಇನ್ನೆಲ್ಲಿಂದ ಗೆಲುವು ದಕ್ಕಲಿದೆ?” ಎಂದು ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆಯೂ ಆಗಿರುವ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ಕೂಡ ಏಕಾಂಗಿಯಾಗಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಅವರಿಗೆಲ್ಲಿದೆ ಅವಕಾಶ? ಎಲ್ಲಾ ಪ್ರಾದೇಶಿಕ ಪಕ್ಷಗಳೂ ತುಂಬಾ ಪ್ರಬಲವಾಗಿವೆ. ಯುಪಿಎ ಆಗಲೀ ಎನ್​ಡಿಎ ಆಗಲೀ ಅಧಿಕಾರ ಹಿಡಿಯಲು ಸಾಧ್ಯವಿಲ್ಲದಂಥ ಸ್ಥಿತಿ ಇದೆ. ಹೊಸ ಮೈತ್ರಿ ರಚನೆಯಾಗಬಹುದು. ಕಾದುನೋಡಿ” ಎಂದು ದೀದಿ ತಿಳಿಸಿದ್ದಾರೆ.

ಒಂದು ವೇಳೆ, ತೃತೀಯ ರಂಗ ರಚನೆಯಾದರೆ ಯಾರು ಪ್ರಧಾನ ಮಂತ್ರಿಯಾಗುತ್ತಾರೆ ಎಂಬ ಪ್ರಶ್ನೆ ಮಮತಾ ಅವರು ಸಾಮೂಹಿಕ ನಾಯಕತ್ವದ ಮಾತನ್ನಾಡಿದ್ದಾರೆ.

“ಆಂಧ್ರ ಆಗಲೀ, ತೆಲಂಗಾಣ, ಒಡಿಶಾ, ಬಿಹಾರ ಅಥವಾ ಅಸ್ಸಾಮ್ ಆಗಲೀ ನಾವೆಲ್ಲಾ ನಾಯಕರು ಒಟ್ಟಿಗೆ ಕೂತು ಚರ್ಚೆ ನಡೆಸಿ ಒಂದು ಸಾಮಾನ್ಯ ಕನಿಷ್ಠ ಕಾರ್ಯಕ್ರಮದಡಿಯಲ್ಲಿ ನಾಯಕರನ್ನು ಆರಿಸುತ್ತೇವೆ” ಎಂದು ಬಂಗಾಳ ಮುಖ್ಯಮಂತ್ರಿಗಳು ಹೇಳಿದ್ದಾರೆ.

2014ರ ಚುನಾವಣೆಯಲ್ಲಿ ಬಂಗಾಳದ 42 ಕ್ಷೇತ್ರಗಳ ಪೈಕಿ ಟಿಎಂಸಿ ಬರೋಬ್ಬರಿ 34ಅನ್ನು ಗೆದ್ದುಕೊಂಡಿತ್ತು. ಇಡೀ ಲೋಕಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಬಿಟ್ಟರೆ ತೃಣಮೂಲ ಪಕ್ಷವೇ ಅತೀ ಹೆಚ್ಚು ಸಂಸದರನ್ನು ಹೊಂದಿದ್ದು. ಈ ಬಾರಿಯೂ ಅದೇ ಫಲಿತಾಂಶ ಬಂದರೆ ಮಮತಾ ಬ್ಯಾನರ್ಜಿ ಅವರ ಹೊಸ ಮೈತ್ರಿಕೂಟ ರಚನೆಯ ಕನಸಿಗೆ ಪುಷ್ಟಿ ಸಿಗಲಿದೆ. ಇದರ ಜೊತೆಗೆ, ಉತ್ತರ ಪ್ರದೇಶದಲ್ಲಿ ಎಸ್​ಪಿ-ಬಿಎಸ್​ಪಿ ನೇತೃತ್ವದ ಮಹಾಘಟಬಂಧನ್ ದೊಡ್ಡಮಟ್ಟದಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆ ಇದೆ. ಹಾಗೆಯೇ, ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಕೂಡ ಮಮತಾ ಜೊತೆಯೇ ನಿಲ್ಲಲಿದೆ. ಇದು ಗಮನರ್ಹವಾದ ಬೆಳವಣಿಗೆಯಾಗಿದೆ.

Comments are closed.