ರಾಷ್ಟ್ರೀಯ

ಹೈದರಾಬಾದ್​ನಲ್ಲಿ ನಾಪತ್ತೆಯಾಗಿದ್ದ ಸಾಫ್ಟ್​ವೇರ್​ ಇಂಜಿನಿಯರ್ ಶವ ಸೂಟ್​ಕೇಸ್​ನಲ್ಲಿ ಪತ್ತೆ

Pinterest LinkedIn Tumblr


ಹೈದರಾಬಾದ್​: ಹೈದರಾಬಾದ್​ನಲ್ಲಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಸಾಫ್ಟ್​ವೇರ್​ ಉದ್ಯೋಗಿಯ ಶವ ಚರಂಡಿಯ ಒಳಗೆ ಬಿಸಾಡಿದ್ದ ಸೂಟ್​ಕೇಸ್​ನಲ್ಲಿ ಪತ್ತೆಯಾಗಿದೆ.

ಹೈದರಾಬಾದ್​ನ ಹೊರವಲಯದಲ್ಲಿರುವ ಸುರಾರಾಮ್​ ಕಾಲೋನಿಯಲ್ಲಿ ಶವ ಪತ್ತೆಯಾಗಿದೆ. ಇಂದು ಮುಂಜಾನೆ ಸ್ಥಳೀಯರು ಸೂಟ್​ಕೇಸ್​ ನೋಡಿದ್ದು, ಅನುಮಾನ ಬಂದಿದ್ದರಿಂದ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಮೃತ ಉದ್ಯೋಗಿಯನ್ನು 25 ವರ್ಷದ ಲಾವಣ್ಯ ಎಂದು ಗುರುತಿಸಲಾಗಿದ್ದು, ಈಕೆ ಕೆಲ ದಿನಗಳಿಂದ ನಾಪತ್ತೆಯಾಗಿದ್ದಳು.

ಲಾವಣ್ಯಳನ್ನು ಆಕೆಯ ಪ್ರಿಯಕರ ಸಾಯಿಸಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಫ್ಟ್​ವೇರ್​ ಉದ್ಯೋಗಿಯಾಗಿದ್ದ ಲಾವಣ್ಯಳ ಪ್ರಿಯಕರ ಸುನಿಲ್ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಕಾಲೇಜಿನಲ್ಲಿ ಆಕೆಯ ಕ್ಲಾಸ್​ಮೇಟ್​ ಕೂಡ ಆಗಿದ್ದ ಆತನನ್ನು ಆಕೆ ಪ್ರೀತಿಸುತ್ತಿದ್ದಳು. ಆದರೆ, ಲಾವಣ್ಯಳನ್ನು ಮದುವೆಯಾಗಲು ಮನಸಿಲ್ಲದ ಸುನಿಲ್ ಆಕೆಯನ್ನು ಸಾಯಿಸಲು ನಿರ್ಧಾರ ಮಾಡಿದ್ದ ಎನ್ನಲಾಗಿದೆ.

ಲಾವಣ್ಯ ನಾಪತ್ತೆಯಾಗಿರುವ ಬಗ್ಗೆ ಕೆಲ ದಿನಗಳ ಹಿಂದೆ ಆಕೆಯ ಕುಟುಂಬಸ್ಥರು ದೂರು ನೀಡಿದ್ದರು. ಹಾಗೇ, ಆಕೆ ಸುನಿಲ್ ಜೊತೆಗೆ ಪ್ರೇಮ ಸಂಬಂಧವಿಟ್ಟುಕೊಂಡಿದ್ದಳು, ಆತನನ್ನು ಮದುವೆಯಾಗಲು ಕೂಡ ಬಯಸಿದ್ದಳು. ಸುನಿಲ್ ಮಸ್ಕತ್​ಗೆ ಹೋಗಿ ಉದ್ಯೋಗ ಮಾಡಲು ನಿರ್ಧರಿಸಿದ್ದ. ಆತನೇ ತಮ್ಮ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದ. ಹಾಗಾಗಿ, ಆಕೆಯನ್ನು ತಾವೇ ಹೈದರಾಬಾದ್​ ವಿಮಾನ ನಿಲ್ದಾಣಕ್ಕೆ ಬಿಟ್ಟುಬಂದಿದ್ದೆವು. ಆನಂತರ ಆಕೆಯ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.

ಪೊಲೀಸರ ಪ್ರಕಾರ, ಲಾವಣ್ಯಳನ್ನು ಹೈದರಾಬಾದ್​ನಲ್ಲಿಯೇ ಲಾಡ್ಜ್​ಗೆ ಕರೆದುಕೊಂಡು ಹೋಗಿದ್ದ ಸುನಿಲ್ 1 ದಿನದ ನಂತರ ಆಕೆಯನ್ನು ಸಾಯಿಸಿ ಸೂಟ್​ಕೇಸ್​ನಲ್ಲಿ ಶವವನ್ನು ತುಂಬಿಸಿದ್ದ. ಆ ಸೂಟ್​ಕೇಸನ್ನು ಚರಂಡಿಯಲ್ಲಿ ಬಿಸಾಡಿದ್ದ. ಮೂಲತಃ ಬಿಹಾರದವನಾದ ಸುನಿಲ್ ಹೈದರಾಬಾದ್​ನಲ್ಲೇ ಶಿಕ್ಷಣ ಮುಗಿಸಿ ಅಲ್ಲೇ ಕೆಲಸಕ್ಕೆ ಸೇರಿದ್ದ. ಕೊಲೆಯ ಆರೋಪದ ಮೇಲೆ ಸುನಿಲ್​ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಲಾವಣ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

Comments are closed.