ಜಮ್ಮು: ವಿಭಿನ್ನ ಚುನಾವಣಾ ಪ್ರಚಾರ ತಂತ್ರಗಳ ಮೂಲಕ ಮತದಾರರನ್ನು ಸೆಳೆಯುವಲ್ಲಿ ಈ ಬಾರಿಯೂ ಭಾರತೀಯ ಜನತಾ ಪಕ್ಷವೇ ಮುಂಚೂಣಿಯಲ್ಲಿರುವಂತಿದೆ. 2014ರ ಲೋಕಸಭಾ ಚುನಾವಣೆಗಳಲ್ಲಿ ‘ಅಬ್ ಕಿ ಬಾರ್ ಮೋದಿ ಸರ್ಕಾರ್’, ‘ಹರ್ ಹರ್ ಮೋದಿ ಘರ್ ಘರ್ ಮೋದಿ’, ‘ಚಾಯ್ ಪೇ ಚರ್ಚಾ’ದಂತಹ ಆಕರ್ಷಕ ಟ್ಯಾಗ್ ಲೈನ್ ಗಳನ್ನು ಬಳಸಿ ದೇಶದ ಮತದಾರರನ್ನು ಅದರಲ್ಲೂ ಯುವ ಮತದಾರರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಈ ಬಾರಿಯೂ ಸಹ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’, ‘ಚೌಕಿದಾರ್ ಶೇರ್ ಹೈ’, ‘ಮೈ ಭಿ ಚೌಕಿದಾರ್’ ಘೋಷಣೆಗಳ ಮೂಲಕ ಬಿಜೆಪಿ ಮತದಾರರತ್ತ ಮತಯಾಚನೆಗೆ ತೆರಳುತ್ತಿದೆ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಬಾಲಿವುಡ್ ನ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಒಂದಾಗಿರುವ ‘ದೀವಾರ್’ ಚಿತ್ರದ ಜನಪ್ರಿಯ ಸಂಭಾಷಣೆ ‘ಮೇರೇ ಪಾಸ್ ಮಾ ಹೈ’ಯನ್ನು (ನನ್ನ ಹತ್ತಿರ ತಾಯಿ ಇದ್ದಾರೆ) ಬದಲಾವಣೆ ಮಾಡಿಕೊಂಡು ‘ಹಮಾರೇ ಪಾಸ್ ಮೋದಿ ಹೈ’ (ನಮ್ಮ ಹತ್ತಿರ ಮೋದಿ ಇದ್ದಾರೆ) ಎಂದು ಮತಯಾಚನೆ ಮಾಡುತ್ತಿದ್ದಾರೆ. ಈ ಮೂಲಕ ಕೇಸರಿ ಪಕ್ಷದಲ್ಲಿ ಸದ್ಯಕ್ಕೆ ನರೇಂದ್ರ ಮೋದಿ ಅವರೇ ಪರಮೋಚ್ಛ ನಾಯಕ ಎಂಬುದನ್ನು ಬಿಂಬಿಸುವ ಪ್ರಯತ್ನಗಳು ಈ ಬಾರಿಯ ಚುನಾವಣೆಯಲ್ಲಿ ಆಗುತ್ತಿದೆ.
ಜಮ್ಮುವಿನ ರಿಯಾಸಿ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಮ್ ಮಾಧವ್ ಅವರು, ‘ನರೇಂದ್ರ ಮೋದಿ ಅವರಿಂದಾಗಿ ಭಾರತವು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಿದೆ. ಮೋದಿ ಅವರು ಕಳೆದ ಐದು ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಭಾರತವನ್ನು ‘ಭ್ರಷ್ಟಾಚಾರ ಹಾಗೂ ಭಯೋತ್ಪಾದನಾ ಮುಕ್ತ’ ದೇಶವನ್ನಾಗಿ ರೂಪಿಸಿದ್ದಾರೆ. ಮಾತ್ರವಲ್ಲದೇ ಗಡಿಯಾಚೆಗಿನ ಭಯೋತ್ಪಾದನಾ ಶಿಬಿರಗಳನ್ನು ಧ್ವಂಸಗೊಳಿಸುವ ಮೂಲಕ ಶತ್ರುವಿನ ಮನೆಗೆ ನುಗ್ಗಿ ಶತ್ರುವಿಗೆ ಹೊಡೆಯುವ ಛಾತಿಯನ್ನು ತೋರಿದ್ದಾರೆ’ ಎಂದು ಹೇಳಿದರು.
ವಿರೋಧಿ ಪಾಳಯಗಳಲ್ಲಿ ಯಾವುದೇ ನಾಯಕರ ಮುಖ ಕಾಣಿಸುತ್ತಿಲ್ಲ, ಆದರೆ ನಮ್ಮಲ್ಲಿ ಮೋದಿ ಇದ್ದಾರೆ. ಅದಕ್ಕಾಗಿಯೇ ಅವರು ‘ಮಹಾಘಟಬಂಧನ್’ ಮಾಡಿಕೊಂಡಿದ್ದಾರೆ, ಆದರೆ ಅವರ ಆ ಪ್ರಯತ್ನ ಅವರೆಣಿಸಿದ ಫಲವನ್ನು ಕೊಟ್ಟಿಲ್ಲ ಯಾಕೆಂದರೆ ಅವರಲ್ಲಿ ಹಲವರು ಪ್ರಧಾನ ಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ರಾಮ್ ಮಾಧವ್ ವಿರೋಧ ಪಕ್ಷದ ನಾಯಕರನ್ನು ಲೇವಡಿ ಮಾಡಿದರು.
Comments are closed.