ರಾಷ್ಟ್ರೀಯ

ವಾರಾಣಾಸಿಯಲ್ಲಿ ಪ್ರಿಯಾಂಕಾ vs ಮೋದಿ?; ರಹಸ್ಯ ಕಾಪಾಡಿಕೊಂಡ ಕಾಂಗ್ರೆಸ್

Pinterest LinkedIn Tumblr


ಲಖನೌ: ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದಿಂದ ಸ್ಪರ್ಧಿಸುವ 9 ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್​ ಈಗಾಗಲೇ ಶನಿವಾರ ಬಿಡುಗಡೆ ಮಾಡಿದೆ. ಆದರೆ, ಗಾಂಧಿ ಕುಟುಂಬದ ಕುಡಿ ಪ್ರಿಯಾಂಕಾ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ಮೂಲಕ ವಾರಾಣಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸುತ್ತಾರೆಯೇ ಎನ್ನುವ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ.

ವಾರಾಣಸಿ ಅಲ್ಲದೆ, ಲಖನೌನಿಂದ ಯಾವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎನ್ನುವ ಅಂತಿಮ ತೀರ್ಮಾನ ಕೈ ಪಾಳಯದಲ್ಲಿ ಆಗಿಲ್ಲ. ಈ ಕ್ಷೇತ್ರದಿಂದ ಗೃಹ ಸಚಿವ ರಾಜನಾಥ್​ ಸಿಂಗ್​ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗಾಗಿ, ಬಲಿಷ್ಠ ನಾಯಕನನ್ನು ಕಣಕ್ಕೆ ಇಳಿಸಬೇಕು ಎನ್ನುವ ಆಲೋಚನೆ ಕೈ ನಾಯಕರದ್ದು.

ಬಾಲಿವುಡ್​ ಕಲಾವಿದ ಹಾಗೂ ಮಾಜಿ ಬಿಜೆಪಿ ಸಂಸದ ಶ್ರತ್ರುಘ್ನ ಸಿನ್ಹಾ ಪತ್ನಿ ಪೂನಮ್​ ಸಿನ್ಹಾ ಪಾಟ್ನಾ ಸಾಹಿಬ್​ನಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದು ಮೂಲಗಳ ಮಾಹಿತಿ. ಇವರು ಕಾಂಗ್ರೆಸ್​ ಬೆಂಬಲದ ಜೊತೆಗೆ ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆಯೂ ಇದೆಯಂತೆ.

ಎಸ್​​ಪಿ-ಬಿಎಸ್​​ಪಿ-ಆರ್​ಎಲ್​ಡಿ ನಡುವೆ ಮೈತ್ರಿ ಏರ್ಪಟ್ಟಿತ್ತು. ಈ ವೇಳೆ ಕಾಂಗ್ರೆಸ್​​ಗೆ ಅಮೇಥಿ ಹಾಗೂ ರಾಯ್​ಬರೇಲಿ ಕ್ಷೇತ್ರಗಳನ್ನು ಮಾತ್ರ ಬಿಟ್ಟುಕೊಡಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಏಂಕಾಗಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿದೆ. ಅಷ್ಟೇ ಅಲ್ಲ, ಮೈತ್ರಿ ವಿರುದ್ಧ ಪ್ರಮುಖ ನಾಯಕರನ್ನು ಕಣಕ್ಕೆ ಇಳಿಸುತ್ತಿದೆ.

ಲೋಕಸಭಾ ಚುನಾವಣೆ ಹಿನ್ನೆಲೆ ಅಖಾಡಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಮೇಲೆ ಬಿಜೆಪಿ ಸೇರಿದಂತೆ ಇತರೆ ಪಕ್ಷಗಳು ಕಣ್ಣಿಟ್ಟಿವೆ. ರಾಷ್ಟ್ರೀಯ ಕಾಂಗ್ರೆಸ್​ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ (ಉತ್ತರಪ್ರದೇಶ ಪೂರ್ವ) ಜವಾಬ್ದಾರಿ ತೆಗೆದುಕೊಂಡಿರುವ ಪ್ರಿಯಾಂಕಾ ಸಾಕಷ್ಟು ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ.

Comments are closed.