ರಾಷ್ಟ್ರೀಯ

ನಮ್ಮ ದೇಶದ ಈ ಜೈಲಿನಲ್ಲಿ ಇರುವುದು ಒಬ್ಬನೇ ಖೈದಿ!

Pinterest LinkedIn Tumblr


ಸೆರೆಮನೆಯಲ್ಲಿ ಒಬ್ಬನೇ ಒಬ್ಬ ಸೆರೆಯಾಳು. ಇಂತಹದೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಇದು ಯಾವುದೇ ಸಿನಿಮಾದ ಕಥೆಯಲ್ಲ. ಬದಲಾಗಿ ಭಾರತದಲ್ಲೇ ಒಂದು ಜೈಲಿನ ಕಥೆ. ಈ ಸೆರೆಮನೆಯಲ್ಲಿರುವುದು ಕೇವಲ ಒಬ್ಬ ಖೈದಿ ಮಾತ್ರ ಎಂದರೆ ನಂಬಲೇಬೇಕು.

ಈ ಒಬ್ಬ ಖೈದಿಗಾಗಿ ಅನೇಕ ಅಧಿಕಾರಿಗಳು ಕಾವಲು ಕಾಯುತ್ತಿದ್ದಾರೆ. ಒಬ್ಬನೇ ಖೈದಿಯಾಗಿರುವುದರಿಂದ ಈತನಿಗಾಗಿ ಆಹಾರವನ್ನು ಹತ್ತಿರದ ರೆಸ್ಟೋರೆಂಟ್​ನಿಂದ ತರಿಸಲಾಗುತ್ತದೆ. ಅಂದರೆ ಆತ ವಿಐಪಿ ಎಂದು ನೀವಂದುಕೊಳ್ಳಬಹುದು. ಆದರೆ ಈತ ಸಮಾನ್ಯ ಖೈದಿ. ಜೈಲಿನಲ್ಲೂ ಒಬ್ಬಂಟಿಯಾದ ನತದೃಷ್ಟ ಎನ್ನಬಹುದು.

ಈ ಜೈಲು ಇರುವುದು ದಿಯು-ದಮನ್ ದ್ವೀಪದಲ್ಲಿ. ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ದಿಯುನಲ್ಲಿರುವ ಕೋಟೆ ಜೈಲು ಏಕೈಕ ಖೈದಿಗೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಪೋರ್ಚುಗೀಸರು ನಿರ್ಮಿಸಿದ್ದ ಈ ಕೋಟೆಯಲ್ಲಿರುವ ಜೈಲಿನಲ್ಲಿ ದೀಪಕ್ ಕಾಂಜಿ ಎಂಬಾತನನ್ನು ಬಂಧಿಸಿಡಲಾಗಿದೆ.

ಹಿಂದೂಸ್ತಾನ್ ಟೈಮ್ಸ್​ ವರದಿ ಪ್ರಕಾರ, ಈ ಜೈಲು 472 ವರ್ಷಗಳಷ್ಟು ಹಳೆಯದ್ದು, ಇದನ್ನು ಭಾರತದ ಪುರಾತತ್ವ ಶಾಸ್ತ್ರ ಇಲಾಖೆಯು ಪ್ರವಾಸಿ ತಾಣವಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಈಗಲೂ ಸಹ ಸಾಕಷ್ಟು ಪ್ರವಾಸಿಗರು ಕೋಟೆಯತ್ತ ಭೇಟಿ ನೀಡುತ್ತಾರೆ. ಆದರೆ ಜೈಲಿನ ಕಂಪೌಂಡ್​ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಈ ಜೈಲಿನಲ್ಲಿರುವ ದೀಪಕ್ ಕಾಂಜಿ ತನ್ನ ಹೆಂಡತಿಗೆ ವಿಷ ಉಣಿಸಿದ್ದರು. ಈ ಆರೋಪದಲ್ಲಿ ಆತನನನ್ನು ಬಂಧಿಸಲಾಗಿದೆ. ಈ ಪ್ರಕರಣವು ಸೆಷನ್​ ಕೋರ್ಟ್​ ಬಾಕಿ ಉಳಿದಿರುವ ಕಾರಣದಿಂದ ಆತನು ಜೈಲಿನಲ್ಲೇ ಉಳಿಯಬೇಕಾಗಿದೆ. ಹೀಗಾಗಿ ದೀಪಕ್​ ಅನ್ನು ಸೆಲ್​ ನಂಬರ್ 4 ರಲ್ಲಿ ಬಂಧಿಸಲಾಗಿದ್ದು, ಪುಟ್ಟ ದ್ವೀಪದಲ್ಲಿ ಇತರೆ ಯಾವುದೇ ಖೈದಿಗಳು ಇಲ್ಲದಿರುವುದರಿಂದ ಏಕಾಂತದಿಂದ ಕಾಲ ಕಳೆಯುವಂತಾಗಿದೆ.

ಈತನ ಕಾವಲಿಗಾಗಿ ಐವರು ಅಧಿಕಾರಿಗಳನ್ನು ನೇಮಿಸಲಾಗಿದೆ. ಅಷ್ಟೇ ಅಲ್ಲದೆ ಪ್ರತಿದಿನ ಈತನಿಗಾಗಿ ಆಹಾರವನ್ನು ಹತ್ತಿರದ ರೆಸ್ಟೋರೆಂಟ್​ಗಳಿಂದ ತರಲಾಗುತ್ತದೆ. ಸಂಜೆ 4 ರಿಂದ 6 ರವರೆಗೆ ಎರಡು ಗಂಟೆಗಳ ಕಾಲ ಸೆಲ್​ನಿಂದ ಖೈದಿಯನ್ನು ಹೊರ ಬಿಡಲಾಗುತ್ತದೆ.

ಈ ಸೆಲ್​ 50 ಚದರ ಮೀಟರ್​ ಹೊಂದಿದ್ದು, ಇದರೊಳಗೆ ಟಿವಿಯೊಂದನ್ನು ಇರಿಸಲಾಗಿದೆ. ಇದರಲ್ಲಿ ದೂರದರ್ಶನ್ ಮತ್ತು ಆಧ್ಯಾತ್ಮಿಕ ಚಾನೆಲ್​ಗಳನ್ನು ಪ್ರಸಾರ ಮಾಡಲಾಗುತ್ತದೆ. 20 ಖೈದಿಗಳನ್ನು ಬಂಧಿಸಬಹುದಾದ ಈ ಸೆರೆಮನೆಯಲ್ಲಿ ಈಗ ದೀಪಕ್ ಕಾಂಜಿ ಏಕಾಂಗಿಯಾಗಿ ಕಾಲ ಕಳೆಯುತ್ತಿದ್ದಾರೆ.

ದಿಯುನಲ್ಲಿರುವ ಈ ಕೋಟೆ ಜೈಲಿನಲ್ಲಿ 8 ಸೆಲ್​ಗಳಿದ್ದು, ಒಟ್ಟು 60 ಖೈದಿಗಳನ್ನು ಬಂಧಿಸಿಡಬಹುದಾಗಿದೆ. ಏಳು ಸೆಲ್​ಗಳಲ್ಲಿ 40 ಪುರುಷರು ಹಾಗೂ 1 ಸೆಲ್​ನಲ್ಲಿ 20 ಮಹಿಳಾ ಖೈದಿಗಳಿಗೆ ಮೀಸಲಿಡಲಾಗಿದೆ. ಆದರೆ ಇಲ್ಲಿ ಅಪರಾಧ ಪ್ರಕರಣಗಳು ತೀರಾ ಕಡಿಮೆ ಇರುವುದರಿಂದ ಸೆಲ್​ಗಳು ಸಾಮಾನ್ಯವಾಗಿ ಖಾಲಿ ಬಿದ್ದಿರುತ್ತದೆ.

2013ರ ವೇಳೆ ಈ ಜೈಲಿನಲ್ಲಿ 7 ಖೈದಿಗಳಿದ್ದರು. ಇದರಲ್ಲಿ ಇಬ್ಬರು ಮಹಿಳೆಯರು ಮತ್ತು ಐವರು ಪುರುಷರು. ಈ ಖೈದಿಗಳಲ್ಲಿ ಇಬ್ಬರ ಸೆರೆವಾಸ ಕೊನೆಗೊಂಡರೆ, 4 ಜನರನ್ನು ಅಮ್ರೆಲಿ ಜೈಲಿಗೆ ಕಳುಹಿಸಲಾಗಿದೆ. ಇನ್ನುಳಿದಿರುವುದು ದೀಪಕ್ ಕಾಂಜಿ ಮಾತ್ರ. ಈತನ ಪ್ರಕರಣ ಕೊನೆಗೊಳ್ಳದ ಕಾರಣ ಈಗಲೂ ಕೋಟೆ ಜೈಲಿನಲ್ಲೇ ಇರಿಸಲಾಗಿದೆ.

Comments are closed.