
ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ‘ಸಂಕಲ್ಪ ಪತ್ರ’ ಎಂಬ ಹೆಸರಿನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ಧಾರೆ. ಈ ವೇಳೆ ವೇದಿಕೆ ಮೇಲೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.
ಅಭಿವೃದ್ಧಿ ಮತ್ತು ರಾಷ್ಟ್ರೀಯ ಭದ್ರತೆಯನ್ನೇ ಮೂಲವನ್ನಾಗಿ ಆಧರಿಸಿ ಬಿಜೆಪಿ ತನ್ನ ಪ್ರಣಾಳಿಕೆ ತಯಾರಿಸಿದೆ. ಚುನಾವಣೆಯ ದೃಷ್ಟಿಯಿಂದ ಮತದಾರನಿಗೆ ಒಳ್ಳೆಯ ಭರವಸೆಗಳನ್ನು ನೀಡಲಾಗಿದೆ. ದೇಶದ ಭದ್ರತೆ, ಆರ್ಥಿಕತೆ ಮತ್ತು ಇತರ ಕಲ್ಯಾಣ ಯೋಜನೆಗಳ ಭರವಸೆ ಬಿಜೆಪಿ ನೀಡಿದೆ. ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎಂಬ ಟ್ಯಾಗ್ಲೈನ್ ಅನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಬಳಸಲಾಗಿದೆ.
ಈ ಬಿಜೆಪಿ ಪ್ರಣಾಳಿಕೆಯಲ್ಲಿ 75 ಅಂಶಗಳಿಗೆ ಒತ್ತು ನೀಡಲಾಗಿದೆ. 6 ಕೋಟಿ ಜನರ ಅಭಿಮತ ಸಂಗ್ರಹಿಸಿ ಪ್ರಣಾಳಿಕೆ ತಯಾರಿ ಮಾಡಲಾಗಿದೆ. ಎಲ್ಲಾ ಕ್ಷೇತ್ರ, ಪ್ರದೇಶ, ಸಮುದಾಯಗಳನ್ನು ಅಭಿವೃದ್ದಿ ಮಾಡುವ ಬಗ್ಗೆ ಯೋಜನೆಗಳನ್ನು ನೀಡುವುದಾಗಿ ತಿಳಿಸಲಾಗಿದೆ. ನವಭಾರತ ನಿರ್ಮಾಣಕ್ಕೆ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ. ಜತೆಗೆ ವಿಧಿ 370, 35 ಎ ರದ್ದುಗೊಳಿಸುವ ಭರವಸೆ, ಕಾಶ್ಮೀರಕ್ಕೆ ವಿಶೇಷ ಸವಲತ್ತುಕೊಡುವ ವಿಧಿ ರದ್ದು, ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕೃಷಿ ಸಾಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಭರವಸೆ ಕೊಟ್ಟಿದ್ದಾರೆ.
ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ, ಜಿಎಸ್ಟಿ ವ್ಯವಸ್ಥೆಯ ಸರಳೀಕರಣ, ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬಿ, ಕೃಷಿ, ಗ್ರಾಮೀಣ ಅಭಿವೃದ್ಧಿಗಾಗಿ 25 ಲಕ್ಷ ಕೋಟಿ ಅನುದಾನ, ರಾಷ್ಟ್ರೀಯ ವ್ಯಾಪಾರಿ ಆಯೋಗ ರಚನೆ, 75 ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, 5 ಕಿ.ಮೀ. ಅಂತರದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ, ನ್ಯಾಯಾಲಯಗಳ ಸಂಪೂರ್ಣ ಡಿಜಿಟಲೀಕರಣ, ಡಿಜಿಟಲ್ ಬ್ಯಾಂಕಿಂಗ್ಗೆ ಉತ್ತೇಜನ, ಅಸಂಘಟಿತ ಕಾರ್ಮಿಕರಿಗೆ ಪೆನ್ಷನ್, ವಿಮೆ, ತ್ರಿವಳಿ ತಲಾಖ್ ನಿಷೇಧ ಜಾರಿಗೆ ಕ್ರಮ, 2022ರ ವೇಳೆಗೆ ಕ್ಲೀನ್ ಗಂಗಾ ಪೂರ್ಣ, ಬಿಜೆಪಿಯ ಸಂಕಲ್ಪ ಪತ್ರದ ಭರವಸೆಗಳು, ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ಕೊಡಲಾಗಿದೆ.
ಜತೆಗೆ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, 1 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರಲ್ಲಿ ಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಕೃಷಿ ಸಾಲ, ಸಣ್ಣ ರೈತರಿಗೆ ಪಿಂಚಣಿ ಯೋಜನೆ, 60 ವರ್ಷ ಮೀರಿದ ರೈತರಿಗೆ ಪಿಂಚಣಿ, ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಕ್ರಮ, 2022ರ ವೇಳೆಗೆ ರೈತರ ಆದಾಯ ದ್ವಿಗುಣ, ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಭೂ ದಾಖಲೆಗಳ ಡಿಜಿಟಲೀಕರಣ, ಮೀನುಗಾರರಿಗೆ ಮತ್ಸ್ಯ ಸಂಪದ ಯೋಜನೆ, ಉನ್ನತ ಶಿಕ್ಷಣಕ್ಕೆ 1 ಲಕ್ಷ ಕೋ. ಅನುದಾನ, ವೃತ್ತಿ ಶಿಕ್ಷಣದಲ್ಲಿ ಶೇ.50ರಷ್ಟು ಸೀಟು ಹೆಚ್ಚಳ, ದೇಶದ ಪ್ರತಿ ಕುಟುಂಬಕ್ಕೂ ಮನೆ ಖಾತ್ರಿ, ಎಲ್ಲ ಬಡ ಕುಟುಂಬಕ್ಕೂ ಎಲ್ಪಿಜಿ ಸೌಲಭ್ಯ, ದೇಶದ ಎಲ್ಲಾ ಮನೆಗಳಿಗೂ ವಿದ್ಯುತ್ ಸಂಪರ್ಕ, ಎಲ್ಲ ನಾಗರಿಕರಿಗೂ ಬ್ಯಾಂಕ್ ಖಾತೆ ಓಪನ್, ಪ್ರತಿ ಮನೆಯಲ್ಲೂ ಶೌಚಾಲಯ ವ್ಯವಸ್ಥೆ, ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ರೀತಿಯ ಸಾಕಷ್ಟು ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಲಾಗಿದೆ.
ಇನ್ನು ಪ್ರಣಾಳಿಕೆ ಬಿಡಗಡೆ ಮುನ್ನ ಮಾತಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಕಳೆದ 5 ವರ್ಷಗಳಲ್ಲಿ ನಾವು ಅಭೂತಪೂರ್ವ ಅಭಿವೃದ್ಧಿ ಮಾಡಿದ್ದೇವೆ. ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥ ಕಾಲಘಟ್ಟವಿದು. ದೇಶಕ್ಕೆ ಮೋದಿ ನೇತೃತ್ವದ ಸರ್ಕಾರ ಕೊಡುಗೆ ನೀಡಿದೆ. ಮೂಲಸೌಕರ್ಯ ಕಲ್ಪಿಸುವಲ್ಲಿ ಸಫಲರಾಗಿದ್ದೇವೆ. ದೇಶದ ಅರ್ಥವ್ಯವಸ್ಥೆಯಲ್ಲೂ ಗಣನೀಯ ಏರಿಕೆಯಾಗಿದೆ. ಜಾಗತಿಕ ತಜ್ಞರಿಂದಲೂ ಅರ್ಥವ್ಯವಸ್ಥೆಗೆ ಶ್ಲಾಘನೆ ದೊರೆತಿದೆ. ಕೇವಲ 5 ವರ್ಷಗಳಲ್ಲಿ ಮಹತ್ವದ ಸಾಧನೆ ಮಾಡಿದ್ದೇವೆ. ರಕ್ಷಣೆ ವಿಚಾರದಲ್ಲಿ ಜಗತ್ತಿಗೆ ಸಂದೇಶ ನೀಡಿದ್ದೇವೆ. ವಿಶ್ವದಲ್ಲಿ ಭಾರತದ ಗೌರವ ಹೆಚ್ಚಾಗಿದೆ ಎಂದರು.
ಇತ್ತೀಚೆಗಷ್ಟೇ ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಗೆ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ. ‘ನ್ಯಾಯ್’ ಯೋಜನೆ ಮೂಲಕ ಬಡ ಕುಟುಂಬಗಳಿಗೆ ವಾರ್ಷಿಕ 72,000 ರೂ. ನೇರ ಸಂದಾಯ, 5 ಕೋಟಿ ಬಡ ಕುಟುಂಬಗಳಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಅನ್ವಯ, ಶಕ್ತಿ ಯೋಜನೆ ಮೂಲಕ ರೈತರ ಸಂಪೂರ್ಣ ಸಾಲಮನ್ನಾ, ಕೃಷಿ ಬಿಕ್ಕಟ್ಟು ನಿವಾರಣೆಗಾಗಿ ಪ್ರಾದೇಶಿಕ ಮಟ್ಟದಲ್ಲಿ ರೈತರ ಬೆಳೆಗೆ ಪೂರಕವಾಗಿ ಕೈಗಾರಿಕೆಗಳ ಸ್ಥಾಪನೆ, ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರಿಗೆ 33% ಮೀಸಲಾತಿ ನೀಡುವುದಾಗಿ ಭರವಸೆ ನೀಡಿದೆ.
Comments are closed.