ರಾಷ್ಟ್ರೀಯ

ಬಿಎಸ್‌ಎನ್‌ಎಲ್‌ ನೆರವಿಗೆ ಮುಂದಾದ ಪ್ರಧಾನಿ ಮೋದಿ!

Pinterest LinkedIn Tumblr


ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ನಲ್ಲಿ 54000ದಷ್ಟುಉದ್ಯೋಗ ಕಡಿತಕ್ಕೆ ದೂರ ಸಂಪರ್ಕ ಸಚಿವಾಲಯ ನಿರ್ಧರಿಸಿದೆ ಎಂಬ ವರದಿಗಳ ಬೆನ್ನಲ್ಲೇ, ಈ ಎರಡೂ ಸಂಸ್ಥೆಗಳ ತ್ವರಿತ ಪುನರುಜ್ಜೀವನಕ್ಕೆ ಪ್ರಧಾನಿ ಕಾರ್ಯಾಲಯ ಆದೇಶಿಸಿದೆ ಎಂಬ ಸುದ್ದಿ ಹೊರಬಿದ್ದಿದೆ.

ಹೀಗಾಗಿ ಕಡ್ಡಾಯ ನಿವೃತ್ತಿ ಭೀತಿಯಲ್ಲಿದ್ದ ಸಾವಿರಾರು ನೌಕರರು ನಿರಾಳರಾಗುವಂತಾಗಿದೆ.

ಕೆಲ ದಿನಗಳ ಹಿಂದೆ ದೂರಸಂಪರ್ಕ ಸಚಿವಾಲಯ, ನೀತಿ ಆಯೋಗ, ಹಣಕಾಸು ಆಯೋಗದ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಕಾರ್ಯಾಲಯದ ಹಿರಿಯ ಅಧಿಕಾರಿಗಳು, ಪುನರುಜ್ಜೀವನದ ಭಾಗವಾಗಿ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಮುಂದಿಟ್ಟಿದ್ದ ಮೂರು ಪ್ರಸ್ತಾವನೆಗಳ ಜಾರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಕ್ಷಣವೇ ಈ ಎರಡೂ ಟೆಲಿಕಾಂ ಕಂಪನಿಗಳಿಗೆ 4ಜಿ ಸ್ಪೆಕ್ಟ್ರಂ ಹಂಚಿಕೆ ಮಾಡಬೇಕು, ಸಿಬ್ಬಂದಿಗಳಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಬೇಕು ಮತ್ತು ತಕ್ಷಣವೇ ಬಂಡವಾಳ ಹೂಡಿಕೆ ಮಾಡಬೇಕು. ಈ ಮೂರು ಪ್ರಸ್ತಾವನೆಗಳ ಜಾರಿಗೆ ಶೀಘ್ರವೇ ಮಾರ್ಗಸೂಚಿ ನೀಡಿ ಎಂದು ಪ್ರಧಾನಿ ಕಾರ್ಯಾಲಯ ಸೂಚಿಸಿದೆ ಎನ್ನಲಾಗಿದೆ.

ಸದ್ಯ ಬಿಎಸ್‌ಎನ್‌ಎಲ್‌ನಲ್ಲಿ 1.76 ಲಕ್ಷ ಮತ್ತು ಎಂಟಿಎನ್‌ಎಲ್‌ನಲ್ಲಿ 22000 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಪೈಕಿ ನಿವೃತ್ತಿ ವಯಸ್ಸನ್ನು 60ರಿಂದ 50 ಇಳಿಸುವ ಮೂಲಕ ಸುಮಾರು 35000 ಸಿಬ್ಬಂದಿ ಮತ್ತು 50 ವರ್ಷ ಮೇಲ್ಪಟ್ಟವರಿಗೆ ವಿಆರ್‌ಎಸ್‌ ನೀಡುವ ಮೂಲಕ 20000 ಸಿಬ್ಬಂದಿ ಕೈಬಿಡುವ ಯೋಜನೆಯೊಂದನ್ನು ದೂರ ಸಂಪರ್ಕ ಸಚಿವಾಲಯ ಅನುಮೋದಿಸಿತ್ತು ಎಂದು ಇತ್ತೀಚೆಗೆ ವರದಿಯಾಗಿತ್ತು.

Comments are closed.