ರಾಷ್ಟ್ರೀಯ

ಉತ್ತರ ಪ್ರದೇಶದ ‘ರಾವಣ’ ಚಂದ್ರಶೇಖರ್ ಆಜಾದ್ ಬಿಜೆಪಿ ಏಜೆಂಟ್, ಭೀಮ್ ಆರ್ಮಿ ಬಿಜೆಪಿಯ ಕೂಸು: ಮಾಯಾವತಿ

Pinterest LinkedIn Tumblr


ನವದೆಹಲಿ: ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ವಿರುದ್ಧ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ವಾಗ್ದಾಳಿ ನಡೆಸಿದರು. ‘ರಾವಣ’ ಎಂದೇ ಖ್ಯಾತನಾಗಿರುವ ಚಂದ್ರಶೇಖರ್ ಅವರ ಈ ನಡೆಯಿಂದ ಬಿಜೆಪಿಗೆ ಅನುಕೂಲವಾಗುತ್ತದೆ ಎಂದು ಮಾಯಾವತಿ ಅಭಿಪ್ರಾಯಪಟ್ಟರು. ಇನ್ನೂ ಮುಂದುವರಿದ ಮಾಯಾವತಿ, ಭೀಮ್ ಆರ್ಮಿ ಬಿಜೆಪಿಯ ಕೂಸು ಎಂದು ಬಣ್ಣಿಸಿದರು. ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ್ ರಾವಣ ಬಿಜೆಪಿಯ ಏಜೆಂಟ್ ಎಂದು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ, ಅದರಲ್ಲೂ ವಾರಾಣಸಿಯಲ್ಲಿ ಬಿಎಸ್​ಪಿಗೆ ಎದುರಾಗಿ ದಲಿತ ಮತಗಳನ್ನ ವಿಭಜಿಸಲು ಚಂದ್ರಶೇಖರ್ ಆಜಾದ್ ಅವರು ಪ್ರಯತ್ನಿಸುತ್ತಿದ್ಧಾರೆ. ಇದೆಲ್ಲವೂ ಬಿಜೆಪಿಯ ಸಂಚೇ ಆಗಿದೆ. ಬಿಜೆಪಿಯದ್ದು ದಲಿತ ವಿರೋಧಿ ಮನಸ್ಥಿತಿ ಎಂಬುದನ್ನು ತೋರಿಸುತ್ತದೆ ಎಂದು ಬಿಎಸ್​ಪಿ ಮುಖ್ಯಸ್ಥೆ ಹೇಳಿದರು.

ಬಿಎಸ್​ಪಿ ಪಕ್ಷವನ್ನು ಒಡೆಯುವ ಉದ್ದೇಶದಿಂದ ಚಂದ್ರಶೇಖರ್ ಅವರನ್ನು ಗುಪ್ತಚರನಂತೆ ಬಿಎಸ್​ಪಿಯೊಳಗೆ ಕಳುಹಿಸಲು ಬಿಜೆಪಿ ಮಾಡಿದ ಪ್ರಯತ್ನ ವಿಫಲವಾಯಿತು. ಇಂಥ ದಲಿತ ವಿರೋಧಿ ಬಿಜೆಪಿಯನ್ನು ಜನರು ಸೋಲಿಸಬೇಕು ಎಂದು ಮಾಯಾವತಿ ಕರೆ ನೀಡಿದರು.

ಇತ್ತೀಚೆಗಷ್ಟೇ ಪ್ರಾರಂಭವಾದ ಭೀಮ್ ಆರ್ಮಿಯು ದಲಿತರ ಪರವಾಗಿ ಹೋರಾಡುವ ಸಂಸ್ಥೆಯಾಗಿದೆ. ದಲಿತ ಸಮುದಾಯದಲ್ಲಿ ದಿನೇ ದಿನೇ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಚಂದ್ರಶೇಖರ್ ಆಜಾದ್ ಇದೀಗ ಪ್ರಮುಖ ದಲಿತ ಮುಖಂಡನೆಂದು ಗುರುತಾಗಿದ್ದಾರೆ. ಮಾಯಾವತಿ ನೇತೃತ್ವದ ಬಿಎಸ್​ಪಿ ಪಕ್ಷದೊಂದಿಗೆ ಕೈ ಜೋಡಿಸಲು ಚಂದ್ರಶೇಖರ್ ಪ್ರಯತ್ನಿಸಿದ್ದರು. ಆದರೆ, ಮಾಯಾವತಿ ಇದಕ್ಕೆ ಆಸ್ಪದ ಕೊಟ್ಟಿಲ್ಲ.

ಇದೀಗ ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಎಸ್​ಪಿ-ಬಿಎಸ್​ಪಿ ಮೈತ್ರಿಕೂಟದ ಅಭ್ಯರ್ಥಿಯಾಗಿ ಇನ್ನೂ ಯಾರು ಕಣಕ್ಕಿಳಿದಿಲ್ಲ. ಒಂದು ವೇಳೆ ಮೋದಿ ವಿರುದ್ಧ ಎಸ್​ಪಿಯವರು ಪ್ರಬಲ ಅಭ್ಯರ್ಥಿ ಹಾಕದೇ ಇದ್ದರೆ ತಾನೇ ಖುದ್ದಾಗಿ ಸ್ಪರ್ಧೆಗೆ ಇಳಿಯುವೆ ಎಂದು ಕೆಲ ದಿನಗಳ ಹಿಂದೆಯೇ ಚಂದ್ರಶೇಖರ್ ‘ರಾವಣ’ ಹೇಳಿದ್ದರು. ಅದರಂತೆ, ಇದೀಗ ಅವರು ಸ್ಪರ್ಧೆ ಮಾಡುತ್ತಿದ್ದು, ಮೋದಿ ಅವರ ಸೋಲಿಗೆ ದಿನಗಣನೆ ಆರಂಭವಾಗಿದೆ ಎಂದು ಹೇಳುವ ಮೂಲಕ ರಣಕಹಳೆ ಊದಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನು ಹಾಕದೇ ಎಸ್​ಪಿ-ಬಿಎಸ್​ಪಿ ಮೈತ್ರಿ ಅಭ್ಯರ್ಥಿಯನ್ನ ಬೆಂಬಲಿಸಲು ನಿರ್ಧರಿಸಿದೆ.

ಕಳೆದ ಬಾರಿಯ, ಅಂದರೆ 2014ರ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಕಣಕ್ಕಿಳಿದಿದ್ದರು. ಆ ಚುನಾವಣೆಯಲ್ಲಿ ಮೋದಿ ನಿರಾಯಾಸ ಗೆಲುವು ಸಾಧಿಸಿದರಾದರೂ ಕೇಜ್ರಿವಾಲ್ ಮತ್ತವರ ತಂಡವು ಅಲ್ಪ ಅವಧಿಯಲ್ಲಿ ಗಮನಾರ್ಹ ಜನಬೆಂಬಲ ಗಳಿಸಿ ಅಚ್ಚರಿ ಮೂಡಿಸಿದ್ದರು.

Comments are closed.