ಕರ್ನಾಟಕ

ಎಲ್ಲ ನನ್ನಿಂದ, ನಾನೇ ಮಾಡುತ್ತಿರುವೆ, ಇದು ಸರ್ವಾಧಿಕಾರಿತನ: ಮೋದಿ ವಿರುದ್ಧ ದೇವೇಗೌಡರ ವಾಗ್ದಾಳಿ

Pinterest LinkedIn Tumblr


ಬೆಂಗಳೂರು: ದೇಶದಲ್ಲಿ ಪ್ರತಿಯೊಂದು ನನ್ನಿಂದಲೇ ನಡೆಯುತ್ತಿದೆ. ಎಲ್ಲವೂ ನಾನು ಮಾಡುತ್ತಿರುವೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಂಬಿಸಿಕೊಳ್ಳುತ್ತಿದ್ದಾರೆ. ಇದುವೇ ಸರ್ವಾಧಿಕಾರಿ ಧೋರಣೆ ಎಂದು ಮಾಜಿ ಪ್ರಧಾನಿ ದೇವೇಗೌಡರು ಟೀಕಿಸಿದ್ದಾರೆ. ಬೆಂಗಳೂರಿನ ನೆಲಮಂಗಲದಲ್ಲಿ ಕಾಂಗ್ರೆಸ್-ಜೆಡಿಎಸ್​ ಮೈತ್ರಿ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ನಾವು ಮಹಾಘಟಬಂಧನ್ ರಚನೆ ಮಾಡಿರುವುದರಿಂದ ಮೋದಿ ಅವರಿಗೆ ಹೊಟ್ಟೆ ಕಿಚ್ಚು ಶುರುವಾಯಿತು. ಅವರು ಪ್ರತಿಯೊಂದು ಕೆಲಸಗಳು ತಮ್ಮಿಂದಲೇ ನಡೆಯುತ್ತಿದೆ ಎಂದು ಅಂದುಕೊಂಡಿದ್ದಾರೆ.

ಅವರಲ್ಲಿನ ಸಾರ್ವಧಿಕಾರಿ ಧೋರಣೆ ನಡುವೆಯು ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಯುತ್ತಿದೆ. ಇದೀಗ ಲೋಕಸಭೆ ಚುನಾವಣೇ ಎದುರಿಸಲು ಸಜ್ಜಾಗಿದ್ದೇವೆ. ನಮ್ಮ ಪಕ್ಷಗಳು 28 ಲೋಕಸಭಾ ಕ್ಷೇತ್ರದಲ್ಲೂ ಹೋರಾಡುತ್ತಿದ್ದೇವೆ. ಆದರೆ ನಮ್ಮ ಮೈತ್ರಿಯನ್ನು ಎಲ್ಲ ಭ್ರಷ್ಟರು ಸೇರಿ ಹೋರಾಟ ಮಾಡುತ್ತಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಈ ರೀತಿಯಾಗಿ ಸುದ್ದಿಗಳನ್ನು ತಿರುಚುವ ಪ್ರಯತ್ನ ಮಾಡಬಾರದು ಎಂದು ದೇವೇಗೌಡರು ಮನವಿ ಮಾಡಿದರು.

ಈ ಕಾರ್ಯಕ್ರಮದ ಮೂಲಕ ದೇಶಕ್ಕೆ ಉತ್ತಮ ಸಂದೇಶ ನೀಡಲು ಬಯಸುತ್ತೇನೆ. ಇಡೀ ದೇಶದಲ್ಲಿ ಒಂದು ಮೈತ್ರಿ ಸರ್ಕಾರ ಒಟ್ಟಗೂಡಿ‌ ಯಾವುದೇ ಗೊಂದಲವಿಲ್ಲದೇ ಲೋಕಸಭೆ ಚುನಾವಣೆಯನ್ನು ಎದುರಿಸುತ್ತಿದೆ. ಇದಕ್ಕೆ ಈ ಬೃಹತ್ ಸಮಾವೇಶವೇ ಸಾಕ್ಷಿ ಎಂದು ದೇವೇಗೌಡರು ತಿಳಿಸಿದರು.

23 ಮೇ 2018ರಲ್ಲಿ ದೇಶದಲ್ಲಿ ಹೊಸ ರಾಜಕೀಯ ಶಕ್ತಿ ಪ್ರಾರಂಭದ ಸಂದೇಶ ಸಾರಿದ್ದೆವು. ಆಗ ಮಹಾಘಟ್​ಬಂಧನ್​ ಅನ್ನು ಮೋದಿ ಅವರು ಮಹಾನಿಲಾವಟ್ ಅಂತಾ​ ವ್ಯಾಖ್ಯಾನ ಮಾಡಿದ್ದರು. ಇಂದು ನಾವು ಸಮಾವೇಶ ನಡೆಸಿರುವ ಉದ್ದೇಶವೂ ಅದುವೇ ಆಗಿದೆ. ನಮ್ಮ ಹೋರಾಟ ಮುಂದುವರೆಯುತ್ತದೆ. ಮೋದಿಯವರಂತೆಯೇ ನಾನೂ 100 ಕಾರ್ಯಕ್ರಮ ಮಾಡುತ್ತೇನೆ. ನಮ್ಮದು ಮಹಾಮಿಲಾವಟ್ ಅಲ್ಲ ಮಹಾಘಟಬಂಧನ್ ಎಂದು ಸಾಬೀತು ಮಾಡುತ್ತೇವೆ ಎಂದು ದೇವೇಗೌಡರು ಘೋಷಿಸಿದರು.

ಭಾರತ ಎಂಬುದು ಎಲ್ಲಾ ಧರ್ಮದವರಿಗೆ ಸೇರಿದ ರಾಷ್ಟ್ರ. ಈ ಸಂದೇಶವನ್ನು ಸಾರುವ ಉದ್ದೇಶದಿಂದ ನಾವೆಲ್ಲರು ಇಂದು ಒಟ್ಟಾಗಿದ್ದೇವೆ. ಈ ಹಿಂದೆ ಸೋನಿಯಾ ಗಾಂಧಿಯವರ ಜೊತೆ ಸಭೆ ನಡೆಸಿ ಚರ್ಚಿಸಿದ್ದೆ. ಆ ಸಂದರ್ಭದಲ್ಲಿ ದೇಶದ 21 ಪ್ರಾದೇಶಿಕ ಪಕ್ಷದ ಮುಖಂಡರು ಭಾಗಿಯಾಗಿದ್ದರು. ನಮ್ಮ ಉದ್ದೇಶ ದೇಶದಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ಇಳಿಸುವುದು. ಜಾತ್ಯತೀತ ತತ್ವದಲ್ಲಿ ನಂಬಿಕೆ ಇರುವ ಸರ್ಕಾರವನ್ನು ಅಧಿಕಾರಕ್ಕೆ ತರುವುದಾಗಿದೆ ಎಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಹೇಳಿದರು.

Comments are closed.