ರಾಷ್ಟ್ರೀಯ

ಅಮೇಥಿಯಲ್ಲಿ ರಾಹುಲ್​​ ವಿರುದ್ಧ ಸ್ಮೃತಿ ಇರಾನಿ ಸ್ಪರ್ಧೆ!

Pinterest LinkedIn Tumblr


ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೆಣಸಲಿರುವ ಉತ್ತರಪ್ರದೇಶದ ಅಮೇಥಿ ಲೋಕಸಭೆ ಕ್ಷೇತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್​ ಅನಾದಿಕಾಲದಿಂದಲೂ ಸತತವಾಗಿ ಗೆಲ್ಲುತ್ತಲೇ ಬರುತ್ತಿದೆ. 1977 ಮತ್ತು 1999ರ ಚುನಾವಣೆ ಹೊರತುಪಡಿಸಿದರೇ, ಇಲ್ಲಿಯವರೆಗೂ ಕಾಂಗ್ರೆಸ್​​​ ಪಕ್ಷವೇ ಗೆಲ್ಲುತ್ತಾ ತನ್ನದೇ ಆದ ಇತಿಹಾಸ ನಿರ್ಮಿಸಿದೆ. ಒಮ್ಮೆ 1977ರಲ್ಲಿ ಜನತಾ ಪಕ್ಷದ ರವೀಂದ್ರ ಪ್ರತಾಪ್ ಸಿಂಗ್, ಇನ್ನೊಮ್ಮೆ 1999ರಲ್ಲಿ ಡಾ. ಸಂಜಯ್ ಸಿಂಗ್ ಅವರು ಗೆದ್ದಿದ್ದರು. ಬಳಿಕ ಕಾಂಗ್ರೆಸ್​​ ಇಲ್ಲಿ ಗೆದ್ದಿದೆಲ್ಲಾ ಬರೀ ಇತಿಹಾಸ. ಇಂತಹ ಕ್ಷೇತ್ರದಲ್ಲಿ ಕಾಂಗ್ರೆಸ್​ ಪ್ರಧಾನಿ ಅಭ್ಯರ್ಥಿ ಎದುರಾಳಿಯಾಗಿ ನಿಲ್ಲುತ್ತಿರುವ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವೆ ಸ್ಮೃತಿ ಇರಾನಿ.

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಲ್ಲಿಯೇ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರ ವಿರುದ್ಧ ಸ್ಮೃತಿ ಇರಾನಿ ಕಣಕ್ಕಿಳಿದಿದ್ದರು. ಇಲ್ಲಿ ರಾಹುಲ್​​ ವಿರುದ್ಧ 1,07,923 ಮತಗಳ ಅಂತರದಿಂದ ಸೋತಿದ್ದರು. ಬಳಿಕ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಕೇಂದ್ರ ಸಚಿವ ಸ್ಥಾನ ಅಲಂಕರಿಸಿದರು.

ಇದೀಗ ಅಮೇಥಿ ಲೋಕಸಭಾ ಕ್ಷೇತ್ರ ಮತ್ತೊಮ್ಮೆ ಜಿದ್ದಾಜಿದ್ದಿಗೆ ವೇದಿಕೆಯಾಗುತ್ತಿದೆ. ಈ ಬಾರಿ ರಾಹುಲ್​​ ಗಾಂಧಿಯನ್ನು ಸೋಲಿಸಲು ಬಿಜೆಪಿ ಸಂಚು ಹೋಡಿ ಇಡೀ ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟನೆ ಕಟ್ಟುತ್ತಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಈ ಬಾರಿ ಗೆಲ್ಲಲೇಬೇಕೆಂದು ಜಿದ್ದಿಗೆ ಬಿದ್ದು, ಸಕ್ರಿಯ ಓಡಾಟ ನಡೆಸುತ್ತಿದ್ಧಾರೆ.

ಇನ್ನು ಸ್ಮೃತಿ ಇರಾನಿಯವರು ಇಂದು ಹುಟ್ಟಿದ ದಿನ. 1976, ಮಾರ್ಚ್​​.23 ರಂದು ಜನಿಸಿದ ಇವರಿಗೆ ಈಗ 43 ವರ್ಷ ವಯಸ್ಸು. ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಮತ್ತೊಮ್ಮೆ ರಾಹುಲ್​​ ವಿರುದ್ಧ ಕಣಕ್ಕೆ ಮುಂದಾಗಿದ್ದಾರೆ. ಹೀಗಾಗಿ ಈ ಬಾರಿ ಗೆಲುವು ನಿಮ್ಮದಾಗಲಿ ಎಂದು ಖುದ್ದು ನರೇಂದ್ರ ಮೋದಿಯವರೇ ಸ್ಮೃತಿ ಇರಾನಿಯವರಿಗೆ ಶುಭಾಶಯ ಕೋರಿದ್ದಾರೆ.

ಹಾಗೆಯೇ “ಸ್ಮೃತಿ ಇರಾನಿ ಅವರಿಗೆ ಜನ್ಮದಿನದ ಶುಭಾಶಯಗಳು. ನೀವು ಸರ್ಕಾರದಲ್ಲಿ ಒಳ್ಳೆಯ ಯೋಜನೆಗಳನ್ನು ಜಾರಿಗೊಳಿಸಲು ಸಾಕಷ್ಟು ಕೆಲಸಗಳನ್ನು ಮಾಡಿದ್ದೀರಿ. ದೇವರು ನಿಮಗೆ ದೀರ್ಘಾಯಸ್ಸು, ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸುತ್ತೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಗೆದ್ದು ಬನ್ನಿ ಎಂದು ಪ್ರಧಾನಿ ಮೋದಿಯವರು ಟ್ವೀಟ್​​ ಮೂಲಕ ಶುಭಾಶಯ ಕೋರಿದ್ಧಾರೆ.

Comments are closed.