ಕರ್ನಾಟಕ

ತುಮಕೂರಿನಲ್ಲಿ ದೇವೆಗೌಡರ ವಿರುದ್ಧ ಕಾಂಗ್ರೆಸ್​ ಸಂಸದ ಕಣಕ್ಕೆ?

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೈತ್ರಿ ನಾಯಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ಸಿನ ಭದ್ರಕೋಟೆ ಜೆಡಿಎಸ್​​ ಪಾಲಿಗಿದ್ದು, ಈಗಾಗಲೇ ಡಿಸಿಎಂ ಡಾ. ಜಿ ಪರಮೇಶ್ವರ್​​ ಮುಖಭಂಗಕ್ಕೀಡಾಗಿದ್ದಾರೆ. ಇಲ್ಲಿಂದಲೇ ಮಾಜಿ ಪ್ರಧಾನಿ ಎಚ್​​.ಡಿ ದೇವೆಗೌಡರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಕ್ಷೇತ್ರ ಉಳಿಸಿಕೊಳ್ಳಲು ಎಷ್ಟೇ ಸರ್ಕಸ್​​ ಮಾಡಿದರೂ ಪರಮೇಶ್ವರ್ ಅವರ ಮಾತಿಗೆ ಕಾಂಗ್ರೆಸ್​​ನಲ್ಲಿ ಮನ್ನಣೆ ದೊರೆತಿಲ್ಲ. ಬಳಿಕ ದೇವೆಗೌಡರು ನಿಂತರೇ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಿಮ್ಮದೇ ಎಂದು ಕಾಂಗ್ರೆಸ್​ ಹೈಕಮಾಂಡ್​ ಕೂಡ ಹೇಳಿತ್ತು. ಡಿಸಿಎಂ ಜವಾಬ್ದಾರಿ ಹೊತ್ತ ಬೆನ್ನಲ್ಲೇ ಸ್ಥಳೀಯ ಕಾಂಗ್ರೆಸ್ಸಿಗರು ಕೂಡ ಪರಮೇಶ್ವರ್​​ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ದೇವೆಗೌಡರ ವಿರುದ್ಧವೇ ಹಾಲಿ ಕಾಂಗ್ರೆಸ್​ ಸಂಸದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್​ ರಾಜ್ಯ ನಾಯಕರಿಗೆ ಏನು ಉತ್ತರ ಕೊಡಬೇಕೆಂದು ಡಿಸಿಎಂ ಪರಮೇಶ್ವರ್​​ ಪೇಚಾಟಕ್ಕೆ ಸಿಲುಕಿದಂತಾಗಿದೆ.

ಇತ್ತ ಜೆಡಿಎಸ್​​ಗೆ ಬಿಟ್ಟಿಕೊಟ್ಟಿರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಡಿಸಿಎಂ ಪರಮೇಶ್ವರ್​​ ಒಂದೆಡೆ ಹೋರಾಟ ಮುಂದುವರೆಸಿದರೇ, ಅತ್ತ ತುಮುಕೂರಿನಿಂದಲೇ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೆಗೌಡರು ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಇದೇ ವಿಚಾರಕ್ಕೆ ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಹೈಕಮಾಂಡ್ ನಿರ್ಧಾರಕ್ಕೆ ಬೇಸತ್ತ ಕಾಂಗ್ರೆಸ್ ಸಂಸದ ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಇದರಿಂದ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಲಿದ್ದು, ಈ ಇಕ್ಕಟ್ಟಿನಲ್ಲಿ ಪರಮೇಶ್ವರ್​​ ಸಿಲುಕಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರು ಯಾವ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ತುಮಕೂರಿನಿಂದಲೇ ಸ್ಪರ್ಧಿಸುವುದಾಗಿ ದೇವೇಗೌಡ ಅವರು ನಿರ್ಧಾರ ಪ್ರಟಿಸಿದ್ದಾರೆ ಎನ್ನಲಾಗಿದೆ. ಸಿಎಂ ಕುಮಾರಸ್ವಾಮಿ, ದೇವೇಗೌಡ ಹಾಗೂ ಇನ್ನಿತರ ಮುಖಂಡರು ಈಗಾಗಲೇ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ದೇವೇಗೌಡ ಅವರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ ಎನ್ನಲಾಗಿದೆ. ದೇವೇಗೌಡರ ಮುಂದೆ ಬೆಂಗಳೂರು ಉತ್ತರ ಮತ್ತು ತುಮಕೂರು ಕ್ಷೇತ್ರಗಳ ಆಯ್ಕೆ ಇತ್ತು. ಆದರೀಗ ಗೆಲ್ಲಲು ತುಮಕೂರೇ ಸೂಕ್ತ ಕ್ಷೇತ್ರವೆಂದು ಇಲ್ಲಿಯೇ ಅಖಾಡಕ್ಕಿಳಿಯಲು ನಿರ್ಧರಿಸಿದ್ದಾರೆ.

ತುಮಕೂರು ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸುವುದಾದರೇ ದೇವೇಗೌಡರು ಮಾರ್ಚ್ 25 ರಂದು(ಸೋಮವಾರ) ನಾಮಪತ್ರ ಸಲ್ಲಿಸಲಿದ್ದಾರೆ. ಈ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಪರಮೇಶ್ವರ್ ಅವರು ಮನವಿ ಮಾಡಿದ್ದರು, ಆದರೆ ಡಿಸಿಎಂ ಮನವಿಗೆ ಬೆಲೆ ದೊರೆತಿಲ್ಲ. ಹೀಗಾಗಿ ಡಿಸಿಎಂ ಪರಮೇಶ್ವರ್​ ಒಂದೆಡೆ ಮುಖಭಂಗಕ್ಕೀಡಾದರೇ, ಮತ್ತೆ ಅದೇ ಪಕ್ಷದ ಸ್ಥಳೀಯ ನಾಯಕರು ಕೂಡ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಕಾಂಗ್ರೆಸ್​ ಹಾಲಿ ಸಂಸದ ಮುದ್ದಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ಧಾರೆ ಎನ್ನಲಾಗಿದೆ.

ಈ ಹಿಂದೆ ಬೆಂಗಳೂರು ಉತ್ತರ ಕ್ಷೇತ್ರದಿಂದ ದೇವೇಗೌಡ ಅವರು ಸ್ಪರ್ಧಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಕ್ಷೇತ್ರದಲ್ಲಿ ಗೆಲುವು ಅಷ್ಟು ಸುಲಭವಲ್ಲ ಎಂಬ ಕಾರಣಕ್ಕೆ ದೇವೇಗೌಡ ಅವರು ಕ್ಷೇತ್ರ ಬದಲಾಯಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಪ್ರಧಾನಿ ದೇವೆಗೌಡ ಅವರು, ಸೋಮವಾರ ನಾನು ನಾಮಪತ್ರ ಸಲ್ಲಿಕೆ ಮಾಡುತ್ತೇನೆ. ತುಮಕೂರಿನಿಂದಲೇ ಸ್ಪರ್ಧೆ ಮಾಡ್ತೀನಿ ಎಂದು ಅಧಿಕೃತವಾಗಿ ಹೇಳಿದರು.

Comments are closed.