ರಾಷ್ಟ್ರೀಯ

ಮತ್ತಷ್ಟು ಸರ್ಜಿಕಲ್‌ ಸ್ಟ್ರೈಕ್‌ ಕುರಿತು ಪಾಕ್‌ಗೆ ಎಚ್ಚರಿಕೆ ನೀಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌

Pinterest LinkedIn Tumblr


ಗುರುಗಾಂವ್‌: ಜಮ್ಮು ಕಾಶ್ಮೀರದ ಪುಲ್ವಾಮಾ ಬಳಿ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ವೀರ ಯೋಧರು ಹುತಾತ್ಮರಾದ ಘಟನೆಯನ್ನು ನಾವಿನ್ನೂ ಮರೆತಿಲ್ಲ. ಇದಕ್ಕೆ ಇನ್ನೂ ತಕ್ಕ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರೀಯ ಅರೆ ಸೇನಾ ಮೀಸಲು ಪಡೆ (ಸಿಆರ್‌ಪಿಎಫ್‌)ಯ 80ನೇ ವಾರ್ಷಿಕೋತ್ಸವದಲ್ಲಿ ಯೋಧರನ್ನು ಉದ್ದೇಶಿಸಿ ಅಜಿತ್‌ ದೋವಲ್‌ ಮಾತನಾಡಿದರು.

ಪುಲ್ವಾಮಾದಲ್ಲಿ ಯೋಧರ ಬಲಿದಾನವನ್ನು ನಾವು ಎಂದೂ ಮರೆಯುವುದಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕರಿಗೂ ಇದರ ಬಗ್ಗೆ ಸಾಕಷ್ಟು ನೋವು ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು ಎಂದು ಅಜಿತ್‌ ದೋವಲ್‌ ತಿಳಿಸಿದರು.

ಪುಲ್ವಾಮಾ ದಾಳಿಯ ಪ್ರತೀಕಾರ ಇನ್ನೂ ಮುಗಿದಿಲ್ಲ. ಉಗ್ರರು, ಉಗ್ರ ನೆಲೆಗಳನ್ನು ಸಂಪೂರ್ಣ ನಾಶವಾಗುವವರೆಗೂ ಸರ್ಜಿಕಲ್‌ ಸ್ಟ್ರೈಕ್‌ ಮುಂದುವರಿಯಲಿದೆ. ಯಾವ ವೇಳೆ, ಯಾವ ರೀತಿಯ ದಾಳಿ ನಡೆಸಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ ಎಂದು ಅವರು ತಿಳಿಸಿದರು.

ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳನ್ನು ನಾಶಪಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಮ ಕೈಗೊಂಡರೂ ಸರಿ, ಇಲ್ಲವೇ ನಾವೇ ನಮ್ಮ ಕೆಲಸ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರು ಹೇಳಿದರು.

ಒಂದು ವೇಳೆ ದಾಳಿ ನಡೆಸಲೇಬೇಕಾದರೆ ಯಾವ ರೀತಿ ಹೇಗೆ ಎಂಬ ನಿರ್ಧಾರನವನ್ನು ಕೈಗೊಳ್ಳಲು ಕೇಂದ್ರ ಸರಕಾರ ಅತ್ಯಂಥ ಸಮರ್ಥವಾಗಿದೆ. ಕೇಂದ್ರದಲ್ಲಿರುವ ನಾಯಕರೂ ದೃಢ ಹಾಗೂ ಕೆಚ್ಚೆದೆಯ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮೋದಿ ಆಡಳಿತದ ಬಗ್ಗೆ ಅಜಿತ್‌ ದೋವಲ್‌ ಮೆಚ್ಚುಗೆ ವ್ಯಕ್ತಪಡಿಸಿದರು.

Comments are closed.