ಹೊಸದಿಲ್ಲಿ: ಪುಲ್ವಾಮಾ ಉಗ್ರ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯು ಪಡೆ ಪಾಕಿಸ್ತಾನದ ಗಡಿ ದಾಟಿ ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ಬಾಂಬ್ ಎಸೆದು ಬಂದ ನಂತರ ದೇಶದ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿಯ ಚುನಾವಣಾ ಲಾಭಾಂಶದ ಅದೃಷ್ಟ ಕುಲಾಯಿಸಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
”ಬಹುಮತ ಗಳಿಕೆಯತ್ತ ಬಿಜೆಪಿ ದಾಪುಗಾಲು ಹಾಕಲಿದೆ. ಆದರೆ ಸಂಪೂರ್ಣ ಬಹುಮತಕ್ಕೆ ಸಣ್ಣ ಕೊರತೆ ಕಾಣಿಸಬಹುದು ಎನ್ನುವ ಸಮೀಕ್ಷೆ ಫೆಬ್ರವರಿ ಆರಂಭದಲ್ಲಿ ಪ್ರಕಟಗೊಂಡಿತ್ತು. ಇದಾಗಿ ಬಾಲಾಕೋಟ್ ದಾಳಿ ನಡೆದು ಹಲವು ಬದಲಾವಣೆಗಳಾದವು. ಇದರ ಪರಿಣಾಮ ಫೆಬ್ರವರಿ ಅಂತ್ಯದ ವೇಳೆಗೆ ಪ್ರಕಟಗೊಂಡ ಮತ್ತೊಂದು ಸಮೀಕ್ಷೆ ಪ್ರಕಾರ, ಬಿಜೆಪಿಯ ಒಟ್ಟು ಸ್ಥಾನ ಗಳಿಕೆಯಲ್ಲಿ 30ರಿಂದ 40 ಸೀಟುಗಳ ಜಿಗಿತ ಕಾಣಿಸಿದೆ. ಏತನ್ಮಧ್ಯೆ, ಈಶಾನ್ಯ ರಾಜ್ಯಗಳಲ್ಲಿ ಮಾಡಿಕೊಂಡ ಚುನಾವಣಾ ಪೂರ್ವ ಹೊಂದಾಣಿಕೆ ಕೂಡ ಬಿಜೆಪಿಗೆ 6ರಿಂದ 10 ಸ್ಥಾನಗಳ ಹೆಚ್ಚುವರಿ ಲಾಭ ತಂದುಕೊಡಲಿದೆ. ಇದರಿಂದ ಎನ್‌ಡಿಎಗೆ ಸ್ಪಷ್ಟ ಬಹುಮತ ದಕ್ಕಬಹುದು” ಎಂದು ಚುನಾವಣಾ ರಣತಂತ್ರ ಪ್ರವೀಣ ಮಹೇಶ್ ನಂದೂರ್ಕರ್ ಹೇಳಿದ್ದಾರೆ.
ಲೋಕಸಭೆ ಚುನಾವಣೆ ಘೋಷಣೆ ಬಳಿಕ ಪ್ರಕಟಗೊಂಡ ಹಲವು ಸಮೀಕ್ಷೆಗಳು ಬಿಜೆಪಿ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳುವ ಭವಿಷ್ಯ ನುಡಿದಿವೆ. ಇದರಿಂದ ದೇಶದ ಷೇರು ಮಾರುಕಟ್ಟೆ ಮೇಲೂ ಸಕಾರಾತ್ಮಕ ಪರಿಣಾಮ ಕಾಣಿಸಿಕೊಂಡಿದೆ.
Comments are closed.