ರಾಷ್ಟ್ರೀಯ

ಯೂಟ್ಯೂಬ್ ನೋಡಿಕೊಂಡು ತಮ್ಮ ಹೆರಿಗೆ ತಾವೇ ಮಾಡಿಕೊಳ್ಳಲು ಯತ್ನಿಸಿದ ತಾಯಿ-ಮಗು ಸಾವು !

Pinterest LinkedIn Tumblr

ಲಖನೌ: ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದ ಅವಿವಾಹಿತ ಮಹಿಳೆಯೊಬ್ಬರು ಯೂಟ್ಯೂಬ್ ನೋಡಿಕೊಂಡು ತಮ್ಮ ಹೆರಿಗೆ ತಾವೇ ಮಾಡಿಕೊಳ್ಳಲು ಯತ್ನಿಸಿ ತಮ್ಮ ಮಗುವಿನೊಂದಿಗೇ ಸಾವಿಗೀಡಾದ ಘೋರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಈ ಘಟನೆ ನಡೆದಿದ್ದು, ಯೂ ಟ್ಯೂಬ್‌ ನಲ್ಲಿ ಮಗು ಪ್ರಸವದ ವೀಡಿಯೊವನ್ನು ವೀಕ್ಷಿಸುತ್ತಾ ಸ್ವತಃ ಹೆರಿಗೆಗೆ ಯತ್ನಿಸಿದ 26ರ ಹರೆಯದ ಅವಿವಾಹಿತ ಮಹಿಳೆ ಮೃತಪಟ್ಟಿದ್ದಾರೆ. ಬಾಡಿಗೆ ಮನೆಯಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ ಮಹಿಳೆ ಹಾಗೂ ನವಜಾತ ಗಂಡು ಶಿಶು ಇಬ್ಬರೂ ಮೃತಪಟ್ಟಿದ್ದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಗೋರಖ್ ಪುರದ ಬಿಲಂದ್ ಶಹರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವತಿ ಮದುವೆಗೆ ಮೊದಲೇ ತಾಯಿಯಾಗಿರುವ ಕಾರಣ ಸಾಮಾಜಿಕ ಕಳಂಕದ ಭೀತಿಯಲ್ಲಿ ಸ್ವತಃ ಹೆರಿಗೆಗೆ ಯತ್ನಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಬೆಳಗ್ಗೆ ಯುವತಿ ಬಾಡಿಗೆ ಪಡೆದಿದ್ದ ಕೊಠಡಿಯ ಹೊರಗೆ ರಕ್ತದ ಕೋಡಿ ಹರಿದಿದ್ದನ್ನು ಗಮನಿಸಿದ ನೆರೆ ಮನೆಯವರು ಮನೆ ಮಾಲಿಕರಿಗೆ ಮಾಹಿತಿ ನೀಡಿದ್ದರು. ಮನೆ ಮಾಲಿಕ ರವಿ ಉಪಾಧ್ಯಾಯ ಮನೆಯ ಬಾಗಿಲು ಒಡೆದು ನೋಡಿದಾಗ ಮಹಿಳೆ ಹಾಗೂ ನವಜಾತ ಶಿಶು ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಿದ್ದಾರೆ.

‘ಸ್ವತಃ ಮಗುವನ್ನು ಪ್ರಸವಿಸುವುದು ಹೇಗೆಂಬ ವಿಡಿಯೋ, ಅದೇ ರೀತಿಯ ಇತರ ಸುರಕ್ಷಿತ ಹೆರಿಗೆಯ ವಿಡಿಯೋವನ್ನು ಯೂ ಟ್ಯೂಬ್‌ನಲ್ಲಿ ವೀಕ್ಷಿಸಿರುವ ವಿಚಾರ ಆಕೆ ಬಳಸುತ್ತಿರುವ ಸ್ಮಾರ್ಟ್ ಫೋನ್ ಮೂಲಕ ಗೊತ್ತಾಗಿದೆ. ಮಹಿಳೆಯ ಮೃತದೇಹದ ಬಳಿ ಕತ್ತರಿ, ಬ್ಲೇಡ್ ಹಾಗೂ ಕೆಲವು ದಾರಗಳು ಪತ್ತೆಯಾಗಿವೆ. ಮಹಿಳೆ ಯೂ ಟ್ಯೂಬ್‌ನ್ನು ವೀಕ್ಷಿಸಿ ಮಗುವಿಗೆ ಜನ್ಮ ನೀಡಲು ಯತ್ನಿಸಿರುವುದು ಪ್ರಾಥಮಿಕ ಪುರಾವೆಯಿಂದ ತಿಳಿದುಬಂದಿದೆ. ಪೋಸ್ಟ್ ಮಾರ್ಟಂ ಬಳಿಕ ಮೃತದೇಹವನ್ನು ಮಹಿಳೆಯರ ಮನೆಯವರಿಗೆ ನೀಡಲಾಗಿದ್ದು, ಅವರು ಯಾವ ವಿರುದ್ಧವೂ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾರೆ’ ಎಂದು ಸ್ಟೇಷನ್ ಹೌಸ್ ಪೊಲೀಸ್ ಠಾಣೆಯ ಆಫೀಸರ್ ರವಿ ರಾಯ್ ತಿಳಿಸಿದ್ದಾರೆ.

Comments are closed.