ರಾಷ್ಟ್ರೀಯ

ಬಿಜೆಪಿ ಸರ್ಕಾರವನ್ನು ಟೀಕಿಸಿದ ಪ್ರೊಫೆಸರ್ ಗೆ ಕೈ ತಪ್ಪಿದ ಸಾಹಿತ್ಯ ಪ್ರಶಸ್ತಿ..!

Pinterest LinkedIn Tumblr


ಹೊಸದಿಲ್ಲಿ: ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರಕಾರವನ್ನು ಟೀಕಿಸಿದ ಪರಿಣಾಮ ಲಖ್ನೋ ವಿಶ್ವವಿದ್ಯಾಲಯದ ದಲಿತ ಪ್ರೊಫೆಸರ್​ ರವಿಕಾಂತ್ ಚಂದನ್ ಅವರಿಗೆ ಸಾಹಿತ್ಯ ಪ್ರಶಸ್ತಿ ನಿರಾಕರಿಸಲಾಗಿದೆ. ಇತ್ತೀಚೆಗೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಸರ್ಕಾರವನ್ನು ಪ್ರಶ್ನಿಸಿ ರವಿಕಾಂತ್ ಅವರು ಪೋಸ್ಟ್​ ಹಾಕಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಕರ್ಮಚಾರಿ ಸಾಹಿತ್ಯ ಸಂಸ್ಥಾನ್ ನೀಡುವ ‘ರಮಣ್ ಲಾಲ್ ಅಗರ್ವಾಲ್ ಪ್ರಶಸ್ತಿ’ಯ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿದೆ.

ರಾಜ್ಯ ಕರ್ಮಚಾರಿ ಸಾಹಿತ್ಯ ಸಂಸ್ಥೆ ವಾರ್ಷಿಕವಾಗಿ ನೀಡುವ ರಾಮನ್ ಲಾಲ್ ಅಗರ್ವಾಲ್ ಪ್ರಶಸ್ತಿಗೆ ರವಿಕಾಂತ್ ಈ ಹಿಂದೆ ನಾಮನಿರ್ದೇಶನಗೊಂಡಿದ್ದರು. ಅಲ್ಲದೆ ಇದೇ ಮಾರ್ಚ್ 17, 2019 ರಂದು ಪ್ರಶಸ್ತಿಯನ್ನು ಸ್ವೀಕರಿಸಬೇಕಾಗಿತ್ತು. ಆದರೆ ಸರ್ಕಾರವನ್ನು ಟೀಕಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಪ್ರಶಸ್ತಿ ನೀಡಲು ನಿರಾಕರಿಸಲಾಗಿದೆ ಎಂದು ತಿಳಿದು ಬಂದಿದೆ.

‘ಮಾರ್ಚ್​ 6 ರಂದು ಈ ಕುರಿತು ರವಿಕಾಂತ್ ಅವರಿಗೆ ರಾಜ್ಯ ಕರ್ಮಚಾರಿ ಸಾಹಿತ್ಯ ಸಂಸ್ಥೆಯಿಂದ ಪತ್ರವೊಂದು ಬಂದಿದ್ದು, ಅದರಲ್ಲಿ ಪ್ರಶಸ್ತಿ ಪಟ್ಟಿಯಿಂದ ತಮ್ಮನ್ನು ಕೈ ಬಿಡಲಾಗಿದೆ ಎಂದು ತಿಳಿಸಲಾಗಿದೆ. ನಾನು ರಾಜ್ಯ ಬಿಜೆಪಿ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ವಿಮರ್ಶಾತ್ಮಕ ಟೀಕೆಗಳನ್ನು ಮಾಡಿರುವುದಕ್ಕೆ ಈ ರೀತಿಯಾಗಿ ಕ್ರಮ ಕೈಗೊಳ್ಳಲಾಗಿದೆ’ ಎಂದು ರವಿಕಾಂತ್ ಖಾಸಗಿ ವೆಬ್​ಸೈಟ್​ವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

‘ಕಳೆದ ವರ್ಷ, ನನ್ನ ಎರಡು ಪುಸ್ತಕಗಳು – ಅಜಾದಿ ಔರ್ ರಾಷ್ಟ್ರವಾದ್ (ಸ್ವಾತಂತ್ರ್ಯ ಮತ್ತು ರಾಷ್ಟ್ರೀಯತೆ) ಮತ್ತು ಆಜ್ ಕೆ ಆಯೆನಿ ಮೇನ್ ರಾಷ್ಟ್ರವಾದ್ ( ಇಂದಿನ ಸನ್ನಿವೇಶದ ರಾಷ್ಟ್ರೀಯತಾವಾದ) ಎಂಬ ಎರಡು ಪುಸ್ತಕಗಳು ಅತ್ಯುತ್ತಮವಾಗಿ ಮಾರಾಟಗೊಂಡಿದೆ. ಆದ್ದರಿಂದ, ನನ್ನ ರಾಜಕೀಯ ದೃಷ್ಟಿಕೋನಗಳು ಎಲ್ಲರಿಗೂ ಚಿರಪರಿಚಿತ. ಸಾಹಿತ್ಯ ಅಥವಾ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿರದ ಒಬ್ಬ ವ್ಯಕ್ತಿಯ ದೂರನ್ನು ಆಧರಿಸಿ ಕರ್ಮಚಾರಿ ಸಾಹಿತ್ಯ ಸಂಸ್ಥೆಯು ನನ್ನ ಪ್ರಶಸ್ತಿಯನ್ನು ರದ್ದುಪಡಿಸಿದೆ. ಈ ಕ್ರಮದಿಂದ ನಿಜವಾಗಲೂ ನಾನು ಅಚ್ಚರಿಗೊಂಡಿರುವುದಾಗಿ ರವಿಕಾಂತ್ ಹೇಳಿದ್ದಾರೆ.

ಪುಲ್ವಾಮಾ ದಾಳಿಯ ನಂತರ ಆಡಳಿತ ಪಕ್ಷದವರು ಉದ್ದೇಶಪೂರ್ವಕವಾಗಿ ಚುನಾವಣಾ ಲಾಭಕ್ಕಾಗಿ ಯುದ್ಧ ಉನ್ಮಾದವನ್ನು ಸೃಷ್ಟಿಸಿಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರ ಆಕ್ರಮಣಕಾರಿ ಭಾಷಣದಿಂದ ಭಾರತದ ರಾಷ್ಟ್ರೀಯ ಭದ್ರತೆ ಬಲಗೊಳ್ಳುವುದಿಲ್ಲ ಎಂದು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.

ಹಾಗೆಯೇ ಮತ್ತೊಂದು ಪೋಸ್ಟ್​ನಲ್ಲಿ ವಿಶ್ವವಿದ್ಯಾಲಯಗಳಲ್ಲಿ ಬೋಧನಾ ವಿಭಾಗದ ನೇಮಕಾತಿಗಳಿಗಾಗಿ 13-ಪಾಯಿಂಟ್ ರೋಸ್ಟರ್ ವ್ಯವಸ್ಥೆಯ ಲೋಪದೋಷಗಳನ್ನು ಅವರು ತಿಳಿಸಿದ್ದರು. ಅಲ್ಲದೆ ವಿಶ್ವವಿದ್ಯಾನಿಲಯಗಳಲ್ಲಿ ದಲಿತರು, ಆದಿವಾಸಿಗಳು, ಮತ್ತು ಒಬಿಸಿಗಳ ನ್ಯಾಯೋಚಿತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು, ಹಳೆಯ 200-ಪಾಯಿಂಟ್ ರೋಸ್ಟರ್ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಬೇಕು ಎಂದು ವಾದಿಸಿದ್ದರು. ಅದೇ ರೀತಿ ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ಇಬ್ಬರು ಬಿಜೆಪಿ ನಾಯಕರುಗಳು ಸಾರ್ವಜನಿಕವಾಗಿ ಹೊಡೆದಾಟ ಪ್ರಕರಣವನ್ನು ಉಲ್ಲೇಖಿಸಿ, ರಾಜ್ಯ ರಾಜಕೀಯ ಸಂಸ್ಕೃತಿಯನ್ನು ರವಿಕಾಂತ್ ತಮ್ಮ ಒಂದು ಪೋಸ್ಟ್ ನಲ್ಲಿ ಪ್ರಶ್ನಿಸಿದ್ದರು.

ಈ ಪೋಸ್ಟ್​ಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಹೊಸದಿಲ್ಲಿ ಮೂಲದ ಎನ್​ಜಿಒ ಹ್ಯೂಮನ್ ಮತ್ತು ಅನಿಮಲ್ ಕ್ರೈಮ್ ಕಂಟ್ರೋಲ್ ಅಸೋಸಿಯೇಷನ್​ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶೈಲೇಂದ್ರ ಸಿಂಗ್ ಅವರು ಕರ್ಮಚಾರಿ ಸಾಹಿತ್ಯ ಸಂಸ್ಥಾನ್​ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ರಾಜಕೀಯ ವಿವಾದಗಳಿಂದ ದೂರವಿರಲು ರವಿಕಾಂತ್ ಅವರಿಗೆ ಪ್ರಶಸ್ತಿ ನೀಡದೇ ಇರಲು ಸಂಸ್ಥಾನ್ ನಿರ್ಧರಿಸಿದೆ ಎಂದು ಅದರ ಪದಾಧಿಕಾರಿಗಳು ತಿಳಿಸಿದ್ದಾರೆ.

Comments are closed.