ರಾಷ್ಟ್ರೀಯ

ಆರೆಸ್ಸೆಸ್ ನಿಂದ ವಿಚಾರಶೂನ್ಯ ಮತಾಂಧರ ತಯಾರಿ: ಒಮರ್ ಅಬ್ದುಲ್ಲಾ

Pinterest LinkedIn Tumblr


ಶ್ರೀನಗರ: ಸರಿಯಾದ ಮಾಹಿತಿ ಕೊರತೆ ಇರುವ ಅಸಹಿಷ್ಣುಗಳು ಆರೆಸ್ಸೆಸ್ ಶಾಖೆಗಳಿಂದ ಸೃಷ್ಟಿಯಾಗುತ್ತಾರೆ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟೀಕಿಸಿದ್ದಾರೆ. ಮದ್ರಸಾಗಳು ಉಗ್ರರ ಹುಟ್ಟಿಗೆ ಕಾರಣ ಎಂಬ ಮಾಜಿ ಡಿಸಿಎಂ ಕವೀಂದರ್ ಗುಪ್ತಾ ಅವರ ಆರೋಪಕ್ಕೆ ಒಮರ್ ಅಬ್ದುಲ್ಲಾ ನೀಡಿದ ಪ್ರತಿಕ್ರಿಯೆ ಇದಾಗಿದೆ. “ಆರೆಸ್ಸೆಸ್ ಶಾಖೆಗಳು ಗುಪ್ತಾ ಅವರಂತಹ ವೈಚಾರಿಕ ಅಂಧರನ್ನು ತಯಾರಿಸುತ್ತದೆ” ಎಂದು ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ನಾಯಕರೂ ಆಗಿರುವ ಕವೀಂದರ್ ಗುಪ್ತಾ ಅವರ ವಿವಾದಾತ್ಮಕ ಹೇಳಿಕೆಗೆ ಕಾಶ್ಮೀರೀ ಮುಖಂಡರುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಪ್ತಾ ಅವರು ಮಾನಸಿಕ ಹತಾಶೆಯಲ್ಲಿ ಮೂರ್ಖತನದ ವರ್ತನೆ ತೋರುತ್ತಿದ್ಧಾರೆ. ಮುಸ್ಲಿಮರ ಬಗ್ಗೆ ಬಿಜೆಪಿಗಿರುವ ಪೂರ್ವಗ್ರಹ ಧೋರಣೆಯನ್ನು ಇದು ತೋರಿಸುತ್ತದೆ ಎಂದು ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷದ ಮುಖ್ಯ ವಕ್ತಾರ ಸಯದ್ ರುಹುಲ್ಲಾ ಮೆಹದಿ ಅವರೂ ಟೀಕಿಸಿದ್ದಾರೆ.

“ಆರೆಸ್ಸೆಸ್​ಗೆ ಸೇರಿದ ವ್ಯಕ್ತಿಯಿಂದ ಈ ಹೇಳಿಕೆ ಬಂದಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್​ನಿಂದ ಯಾವ ಪಾತ್ರವೂ ಇರಲಿಲ್ಲ. ಬದಲಾಗಿ, ಸ್ವಾತಂತ್ರ್ಯ ಹೋರಾಟದ ವಿರುದ್ಧವೇ ಆರೆಸ್ಸೆಸ್ ಕೆಲಸ ಮಾಡಿತ್ತು. ಮಹಾತ್ಮ ಗಾಂಧಿಯನ್ನು ಕೊಂದ ವ್ಯಕ್ತಿಯೂ ಆರೆಸ್ಸೆಸ್​ಗೆ ಸಂಬಂಧಿಸಿದ್ದವನು. ಗಾಂಧೀಜಿ ಹತ್ಯೆಯಾದ ನಂತರ ಆರೆಸ್ಸೆಸ್​ನ್ನೂ ನಿಷೇಧಿಸಲಾಗಿತ್ತೆಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ” ಎಂದು ಮೆಹದಿ ಹೇಳಿದ್ದಾರೆ.

“ಭಾರತದ ಸಂವಿಧಾನವನ್ನೇ ವಿರೋಧಿಸಿದ್ದವರಿಂದ ಮುಸ್ಲಿಮರು ರಾಷ್ಟ್ರೀಯತೆಯ ಪಾಠ ಕಲಿಯುವ ಅಗತ್ಯವಿಲ್ಲ. 1857ರ ಸಿಪಾಯಿ ದಂಗೆ ಸೇರಿದಂತೆ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟದಲ್ಲಿ ಮದ್ರಸಾಗಳ ಪಾತ್ರದ ಬಗ್ಗೆ ಎಲ್ಲರಿಗೂ ಗೊತ್ತು. ಗುಪ್ತಾರಂತಹ ವ್ಯಕ್ತಿಗಳಿಂದ ಹೇಳಿಕೊಳ್ಳಿಸಬೇಕಿಲ್ಲ” ಎಂದು ನ್ಯಾಷನಲ್ ಕಾನ್ಫೆರೆನ್ಸ್ ವಕ್ತಾರರು ತಿಳಿಸಿದ್ದಾರೆ.

ದೇಶದ ಮೊದಲ ಶಿಕ್ಷಣ ಸಚಿವ ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರೂ ಮದ್ರಸಾದಲ್ಲೇ ಓದಿದವರಾಗಿದ್ದಾರೆ. ಭಾರತದಲ್ಲಿ ಮಾನವೀಯತೆ, ಸಾಮಾಜಿಕ ಮೌಲ್ಯ ಮೊದಲಾದವನ್ನು ರಕ್ಷಿಸಲು ಮದ್ರಸಾಗಳು ಪ್ರಮುಖ ಪಾತ್ರ ವಹಿಸಿವೆ. ರಾಷ್ಟ್ರ ನಿರ್ಮಾಣದಲ್ಲಿ ಮುಸ್ಲಿಮರು ಮತ್ತು ಮದ್ರಸಾಗಳು ವಹಿಸಿರುವ ಪಾತ್ರವು ಬೇರಾರಿಗೂ ಕಡಿಮೆ ಇಲ್ಲ ಎಂದು ಸಯದ್ ರುಹುಲ್ಲಾ ಮೆಹದಿ ಅಭಿಪ್ರಾಯಪಟ್ಟಿದ್ಧಾರೆ.

Comments are closed.