ರಾಷ್ಟ್ರೀಯ

ಬಾಲಾಕೋಟ್​ನಲ್ಲಿ ಸತ್ತ ಉಗ್ರರ ಶವ ನೋಡಬೇಕು: ಯೋಧರ ಕುಟುಂಬಗಳಿಂದ ಆಗ್ರಹ

Pinterest LinkedIn Tumblr


ನವದೆಹಲಿ: ಪುಲ್ವಾಮ ಉಗ್ರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ 200-350 ಉಗ್ರರು ಸತ್ತಿದ್ದಾರೆಂದು ಕೇಂದ್ರ ಸರಕಾರ ಹಾಗೂ ಬಿಜೆಪಿಯವರು ಹೇಳುತ್ತಿದ್ದಾರೆ. ಆದರೆ, ಉಗ್ರರು ಸತ್ತಿರುವುದಕ್ಕೆ ಸಾಕ್ಷಿ ಕೊಡಿ ಎಂದು ವಿಪಕ್ಷಗಳು ಮೊದಲಿಂದಲೂ ಆಗ್ರಹಿಸುತ್ತಾ ಬಂದಿವೆ. ಪುಲ್ವಾಮ ಉಗ್ರ ದಾಳಿಯಲ್ಲಿ ಬಲಿಯಾದ 40 ಯೋಧರ ಕುಟುಂಬದವರೂ ಕೂಡ ವಿಪಕ್ಷಗಳ ಆಗ್ರಹಕ್ಕೆ ಧ್ವನಿಗೂಡಿಸಿದ್ದಾರೆ. ತಮ್ಮ ಕುಟುಂಬ ಸದಸ್ಯರನ್ನು ಬಲಿತೆಗೆದುಕೊಂಡ ಉಗ್ರರ ಶವಗಳನ್ನು ತಾವು ನೋಡಬೇಕು. ಬಾಲಾಕೋಟ್ ದಾಳಿಯಲ್ಲಿ ಹತ್ಯೆಯಾದ ಉಗ್ರರ ಶವಗಳನ್ನು ತಮಗೆ ತೋರಿಸಿ ಎಂದು ಕೆಲ ಯೋಧರ ಕುಟುಂಬದವರು ಒತ್ತಾಯಿಸಿದ್ದಾರೆಂದು ಎನ್​ಡಿಟಿವಿ ವರದಿ ಮಾಡಿದೆ.

ಯೋಧರಾದ ಪ್ರದೀಪ್ ಕುಮಾರ್ ಮತ್ತು ರಾಮ್ ವಕೀಲ್ ಅವರು ಪುಲ್ವಾಮ ದಾಳಿಯಲ್ಲಿ ಬಲಿಯಾದವರಲ್ಲಿದ್ದಾರೆ. ಈ ಇಬ್ಬರು ಯೋಧರ ಕುಟುಂಬ ಸದಸ್ಯರು ಈಗ ಬಾಲಾಕೋಟ್ ದಾಳಿಯ ಫಲಿತಾಂಶದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

“ಪುಲ್ವಾಮ ದಾಳಿಯಲ್ಲಿ ನಮಗೆ ಕೆಲ ಯೋಧರ ಕೈಗಳು, ಕೆಲ ಯೋಧರ ಕಾಲುಗಳು ಕಂಡವು. ಅದೇ ಸ್ಥಿತಿಯಲ್ಲಿ ತಾವು ಉಗ್ರರನ್ನು ಕಾಣುವ ಆಸೆ ಇದೆ. ಬಾಂಬ್ ದಾಳಿಗೆ ಯಾರೋ ಒಬ್ಬರು ತತ್​ಕ್ಷಣವೇ ಹೊಣೆ ಹೊತ್ತುಕೊಂಡರು. ಇದಕ್ಕೆ ಪ್ರತಿ ದಾಳಿ ಆಗಿರುವುದು ನಿಜ. ಆದರೆ, ಎಲ್ಲಿ ಮಾಡಿದ್ದಾರೆ? ಅದಕ್ಕೆ ಸ್ಪಷ್ಟ ಸಾಕ್ಷ್ಯ ಇರಬೇಕು. ಈ ಸಾಕ್ಷಿ ಇಲ್ಲದಿದ್ದರೆ ನಾವು ಹೇಗೆ ಒಪ್ಪಿಕೊಳ್ಳುವುದು? ತಮ್ಮ ಪ್ರದೇಶದಲ್ಲಿ ಯಾವ ಹಾನಿಯೂ ಆಗಿಲ್ಲವೆಂದು ಪಾಕಿಸ್ತಾನ ಹೇಳುತ್ತಿದೆ. ಸಾಕ್ಷ್ಯವಿಲ್ಲದೆ ಬಾಲಾಕೋಟ್ ದಾಳಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ,” ಎಂದು ಮೃತ ಯೋಧ ರಾಮ್ ವಕೀಲ್ ಅವರ ಸಹೋದರಿ ರಾಮ್ ರಕ್ಷಾ ಅವರು ಹೇಳಿದ್ದಾರೆಂದು ಎನ್​ಡಿಟಿವಿ ವರದಿ ಮಾಡಿದೆ.

ಅತ್ತ, ಮತ್ತೊಬ್ಬ ಮೃತ ಯೋಧ ಪ್ರದೀಪ್ ಕುಮಾರ್ ಅವರ ತಾಯಿ ಕೂಡ ಈ ಮಾತನ್ನೇ ಪುನರುಚ್ಚರಿಸಿದ್ದಾರೆ. “ನಮಗೆ ತೃಪ್ತಿ ತಂದಿಲ್ಲ. ಪುಲ್ವಾಮದಲ್ಲಿ ಎಷ್ಟೊಂದು ಮಕ್ಕಳು ಸತ್ತರು. ಆದರೆ, ಬಾಲಾಕೋಟ್​ನಲ್ಲಿ ಯಾರೂ ಸತ್ತಿದ್ದು ನೋಡಿಲ್ಲ. ಅಲ್ಲಿ ಯಾವ ಶವವೂ ಕಾಣಲಿಲ್ಲ. ಅಥವಾ ಖಚಿತ ಸುದ್ದಿಯೂ ಬರಲಿಲ್ಲ. ಟಿವಿಯಲ್ಲಿ ನಾವು ನೋಡಬೇಕಾಯಿತು. ಹೀಗಾಯಿತು ಎಂದು ಮನೆಯಲ್ಲಿ ನಮಗೆ ಹೇಳಬೇಕಾಯಿತು. ನಾವು ಉಗ್ರರ ಶವಗಳನ್ನು ನೋಡಬೇಕು” ಎಂದು 80 ವರ್ಷಕ್ಕೂ ಹೆಚ್ಚು ವಯಸ್ಸಿನ ಸುಲೇಲತಾ ಅವರು ಇಚ್ಛೆ ತೋರ್ಪಡಿಸಿಕೊಂಡಿದ್ದಾರೆ.

Comments are closed.