ರಾಷ್ಟ್ರೀಯ

ಪತಿಯ ಆತ್ಮಕ್ಕೆ ಶಾಂತಿ ನೀಡಲು ಸೇನೆಗೆ ಸೇರಿದ ಹುತಾತ್ಮ ಮೇಜರ್​​ ಮಡದಿ; ಇವರದು ಅಪರೂಪದ ಪ್ರೇಮಕಥೆ!

Pinterest LinkedIn Tumblr


ಅವರಿಬ್ಬರೂ ಭೇಟಿಯಾಗಿದ್ದು ಮ್ಯಾಟ್ರಿಮೊನಿ ವೆಬ್​ಸೈಟ್​ ಮೂಲಕ. ಆಕೆಗೆ ಆತ ಇಷ್ಟವಾದ. ಆತನಿಗೂ ಇಷ್ಟವಾಗಿರಬಹುದು. ಹಾಗಾಗಿಯೇ ಆಕೆಯನ್ನು ಭೇಟಿಯಾಗಬೇಕು ಎಂದು ಬಯಸಿದ್ದ. ಅದು 2014ರ ಫೆಬ್ರವರಿ 22 ವಿಶೇಷವಾದ ದಿನ. ಇಬ್ಬರೂ ಮೊದಲ ಬಾರಿಗೆ ಭೇಟಿಯಾಗುವವರಿದ್ದರು. ಆಕೆಗೋ ಒಂಥರಾ ತಳಮಳ. ಅದುವರೆಗೂ ಅನೇಕ ಹುಡುಗರನ್ನು ಮ್ಯಾಟ್ರಿಮೊನಿಯ ಮೂಲಕ ಭೇಟಿಯಾಗಿದ್ದಳು. ಆದರೆ, ಈ ಹುಡುಗ ಯಾಕೋ ಹೆಚ್ಚು ಇಷ್ಟವಾಗಿದ್ದ. ಆದರೆ, ಅಲ್ಲಿಗೆ ಹೋದಮೇಲೇ ಗೊತ್ತಾಗಿದ್ದು ಆತ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್​ ಆಗಿದ್ದಾನೆ ಅಂತ. ಅವಳಿಗೋ ದೊಡ್ಡ ಶಾಕ್​! ಅವಳ ಮತ್ತು ಆಕೆಯ ಮನೆಯವರ ಕಲ್ಪನೆಯ ಹುಡುಗ ಬೇರೆಯೇ ಆಗಿದ್ದ. ಆತ ಮೊದಲ ಭೇಟಿಯಲ್ಲೇ ತನ್ನ ಕೆಲಸದ ರೀತಿ, ಕಮಿಟ್​ಮೆಂಟ್​ಗಳೆಲ್ಲವನ್ನೂ ಹೇಳಿಕೊಂಡು ಹಿಂಜರಿಕೆಯಿಂದಲೇ ಆಕೆಗೆ ಪ್ರಪೋಸ್​ ಮಾಡಿದ. ಒಂದು ಕ್ಷಣ ಯೋಚಿಸಿದ ಆಕೆ, ‘ಖಂಡಿತ ನಿಮ್ಮನ್ನು ಮದುವೆಯಾಗ್ತೀನಿ ಕ್ಯಾಪ್ಟನ್​!’ ಎಂದಳು.

ಇದೇನಿದು? ಯಾವುದೋ ಸಿನಿಮಾ ಕತೆ ಇದ್ದ ಹಾಗಿದೆಯಲ್ಲ ಎಂದು ನಿಮಗೆ ಅನಿಸಿದರೆ ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ ಮೇಜರ್​​ ಗಣೇಶ್​ ಪ್ರಸಾದ್​ ಮಹಾದಿಕ್​ ಹಾಗೂ ಗೌರಿ ಮಹಾದಿಕ್ ಅವರ ಕತೆ ಯಾವ ಸಿನಿಮಾಗೂ ಕಡಿಮೆಯಿಲ್ಲ. ದುರಂತ ಅಂತ್ಯ ಕಂಡ ತಮ್ಮಿಬ್ಬರ ಪ್ರೇಮಕತೆಯನ್ನು ಸುಖಾಂತ್ಯಗೊಳಿಸಲು ಪಣ ತೊಟ್ಟಿದ್ದಾರೆ ಗೌರಿ ಮಹಾದಿಕ್.

ಟ್ರೆಂಡ್​ ಆಯ್ತು ಸೈನಿಕರ ಸಾಹಸ ದೃಶ್ಯಗಳನ್ನೊಳಗೊಂಡ ನೀರೆಯರ ಸೀರೆ

ಗಂಡನ ಕನಸನ್ನು ನನಸಾಗಿಸಲಿದ್ದಾರೆ ಗೌರಿ:
ಗಣೇಶ್​ ಮಹಾದಿಕ್ ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್​ ಆಗಿದ್ದವರು. 2017ರ ಡಿಸೆಂಬರ್​ನಲ್ಲಿ ಇಂಡೋ- ಚೀನಾ ಗಡಿಯಲ್ಲಿ ಕ್ಯಾಂಪ್​ನಲ್ಲಿ ಘಟಿಸಿದ ಅಗ್ನಿ ಅವಘಡದಲ್ಲಿ ಅವರು ಹುತಾತ್ಮರಾಗಿದ್ದರು. ಆಗಿನ್ನೂ ಅವರು ಮದುವೆಯಾಗಿ ಕೇವಲ 2 ವರ್ಷವಾಗಿತ್ತು. ವರ್ಷದಲ್ಲಿ ಒಂದೋ ಎರಡೋ ಬಾರಿಯೋ ಪೋಷಕರು ಮತ್ತು ಪತ್ನಿಯನ್ನು ನೋಡಲು ಹೋಗುತ್ತಿದ್ದ ಅವರೊಡನೆ ಪತ್ನಿ ಗೌರಿ ಮಹಾದಿಕ್ ಕಳೆದ ಕ್ಷಣಗಳು ಬೆರಳೆಣಿಕೆಯಷ್ಟು ಮಾತ್ರ. ಆದರೆ, ಆ ಎಲ್ಲ ನೆನಪುಗಳನ್ನೂ ಎದೆಯಲ್ಲಿ ಬೆಚ್ಚಗೆ ಬಚ್ಚಿಟ್ಟುಕೊಂಡು ಗಂಡನ ಕನಸನ್ನು ಮುನ್ನಡೆಸಿಕೊಂಡು ಹೋಗಲು ಹಠ ತೊಟ್ಟ ಗೌರಿಯ ಮನೋಸ್ಥೈರ್ಯ ಎಂಥವರ ಮನಸನ್ನೂ ಕರಗಿಸುತ್ತದೆ.

ರಜೆಯ ಮೇಲೆ ಊರಿಗೆ ಬಂದಿದ್ದ ಕ್ಯಾಪ್ಟನ್​ ಗಣೇಶ್​ ಮ್ಯಾಟ್ರಿಮೊನಿಯಲ್ಲಿ ನೋಡಿದ್ದ ಗೌರಿ ಅವರನ್ನು ನೋಡಲು ಹೋದಾಗ ತನ್ನ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದರು. ಅಲ್ಲದೆ, ನಿಧಾನವಾಗಿ ಯೋಚಿಸಿ ನಿರ್ಧಾರ ತಿಳಿಸುವಂತೆಯೂ ಹೇಳಿದ್ದರು. ಆದರೆ, ಗೌರಿ ಅಲ್ಲ್ಲಿಯೇ ತನ್ನ ಒಪ್ಪಿಗೆಯನ್ನು ತಿಳಿಸಿದ್ದರು. ತನ್ನ ತಂದೆ-ತಾಯಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದಾಗಲೂ ಸಮಾಧಾನ ಹೇಳಿದ್ದ ಗೌರಿ, ‘ಬೇರೆ ಯಾರೋ ಸಾಮಾನ್ಯನನ್ನು ಮದುವೆಯಾದರೆ ಆತ ಕೊನೆಯವರೆಗೂ ನನ್ನ ಜೊತೆಯಲ್ಲೇ ಇರುತ್ತಾನೆ ಎಂದು ಯಾವ ಗ್ಯಾರಂಟಿಯಿದೆ? ಅದೇ ಕೋಟ್ಯಂತರ ಜನರ ಸುರಕ್ಷತೆಗಾಗಿ ದೇಶದ ಗಡಿ ಕಾಯುವ ಸೈನಿಕನನ್ನು ಮದುವೆಯಾದರೆ ಆತ್ಮತೃಪ್ತಿಯಾದರೂ ಇರುತ್ತದೆ’ ಎಂದು ಆಕೆ ಹೇಳಿದ್ದರು. ಗಣೇಶ್​ ಅವರ ತಂದೆ ಕೂಡ ‘ನನ್ನ ಮಗನಿಗೆ ಯಾವ ಸಮಯದಲ್ಲಿ ಏನು ಬೇಕಾದರೂ ಆಗಬಹುದು. ಯೋಚಿಸಿ ನಿರ್ಧಾರ ತೆಗೆದುಕೋ’ ಎಂದು ಹೇಳಿದ್ದರು. ಆದರೆ, ಗೌರಿಯ ನಿರ್ಧಾರ ಗಟ್ಟಿಯಾಗಿತ್ತು.

ಅಪ್ಪ ಭಾರತದ ಕೃಷಿ ಸಚಿವ, ಮಗ ಪಾಕ್ ಸೇನಾಧಿಕಾರಿ: ಇದು ತೆರೆಮರೆಯ ಕಥೆ..!

ಐ ಲವ್​ ಯೂ ಎಂದು ಪಿಸುಗುಟ್ಟಿದಂತಾಗುತ್ತದೆ:
ಕ್ಯಾಪ್ಟನ್​ ಗಣೇಶ್​ ಸಾಯುವ ಹಿಂದಿನ ದಿನ ಸಂಜೆ ಗೌರಿಗೆ ಕರೆ ಮಾಡಿದ್ದರು. ಆಗ ಯಾವುದೋ ಕಾರಣಕ್ಕೆ ಅವರಿಬ್ಬರ ನಡುವೆ ವಾಗ್ವಾದವೂ ನಡೆದಿತ್ತು ಎಂದು ನೆನಪಿಸಿಕೊಳ್ಳುವ ಗೌರಿ, ‘ಅವರೊಂದಿಗೆ ಕಳೆದ ಪ್ರತಿಕ್ಷಣವನ್ನೂ ನಾನು ದಾಖಲು ಮಾಡಿಟ್ಟುಕೊಂಡಿದ್ದೇನೆ. ನಾನು ಅವರೊಂದಿಗೆ ಕಳೆದ ದಿನಗಳು ಬಹಳ ಕಡಿಮೆಯೇ ಆಗಿರಬಹುದು. ಆದರೆ, ಅವರು ಮನೆಯಲ್ಲಿದ್ದಾಗ ನಾನು ಕ್ಲಿಕ್ಕಿಸಿಕೊಂಡ 36 ಸಾವಿರಕ್ಕೂ ಹೆಚ್ಚು ಫೋಟೋಗಳು ನನ್ನ ಬಳಿ ಭದ್ರವಾಗಿವೆ. ನಮ್ಮಿಬ್ಬರ ಮಾತುಗಳನ್ನು ನಾನು ರೆಕಾರ್ಡ್​ ಮಾಡಿಟ್ಟಕೊಳ್ಳುತ್ತಿದ್ದೆ. ಹಾಗಾಗಿ, ಅವರ ನೆನಪು ಬಂದಾಗಲೆಲ್ಲ ಆ ರೆಕಾರ್ಡಿಂಗ್​ ಕೇಳುತ್ತೇನೆ. ಆಗೆಲ್ಲ ಅವರು ಈಗಲೂ ಜೀವಂತವಾಗಿದ್ದಾರೆ, ಐ ಲವ್​ ಯೂ ಎನ್ನುತ್ತ ನನ್ನನ್ನು ಸಂತೈಸುತ್ತಿದ್ದಾರೆ ಎಂದು ಸಮಾಧಾನವಾಗುತ್ತದೆ. ಕೊನೆಯವರೆಗೂ ಅವರೊಂದಿಗೆ ಕಳೆದ ನೆನಪುಗಳ ಜೊತೆಗೆ ಜೀವನ ಕಳೆಯುತ್ತೇನೆ’ ಎನ್ನುತ್ತಾರೆ.

ಗಂಡನ ಯೂನಿಫಾರಂ ಧರಿಸಬೇಕೆಂಬುದೇ ನನ್ನಾಸೆ:
ಗಣೇಶ್​ ಅವರು ಇಹಲೋಕ ತ್ಯಜಿಸಿ ಎರಡೂವರೆ ವರ್ಷವಾಗಿದೆ. ಆದರೆ, ಗೌರಿಯ ನೆನಪುಗಳಲ್ಲಿ ಅವರ ಜೀವಂತವಾಗಿದ್ದಾರೆ. ಗಣೇಶ್​ ಸಾವನ್ನಪ್ಪಿದ ವಿಷಯ ಕೇಳಿ ಇಡೀ ಕುಟುಂಬಕ್ಕೆ ಸಿಡಿಲು ಬಡಿದಂತಾಗಿತ್ತು. ಆದರೆ, ಗೌರಿ ಸುಮ್ಮನೆ ಅಳುತ್ತಾ ಕೂರಲಿಲ್ಲ. ಮುಂಬೈನ ಲಾ ಫರ್ಮ್​ನಲ್ಲಿ ಉದ್ಯೋಗಿಯಾಗಿದ್ದ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸೇನೆಗೆ ಸೇರಲು ಸಿದ್ಧತೆ ನಡೆಸಿದರು. ಅದಕ್ಕಾಗಿ ಪರೀಕ್ಷೆಯನ್ನೂ ತೆಗೆದುಕೊಂಡರು. ಮೊದಲ ಪ್ರಯತ್ನದಲ್ಲಿ ಫೇಲಾದ ಗೌರಿ ತಮ್ಮ ಹಠ ಬಿಡಲಿಲ್ಲ. ಇದೀಗ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅವರು 2020ರ ವೇಳೆಗೆ ಭಾರತೀಯ ಸೇನೆಯನ್ನು ಸೇರಲಿದ್ದಾರೆ! ಗಂಡ ಧರಿಸುತ್ತಿದ್ದ ಯೂನಿಫಾರಂ ಧರಿಸುವ ಮೂಲಕ, ಅವರ ಸ್ಟಾರ್​ಗಳನ್ನು ಹಾಕಿಕೊಳ್ಳುವ ಮೂಲಕ ಪ್ರೀತಿಯ ಗಂಡನ ಆತ್ಮಕ್ಕೆ ಶಾಂತಿ ನೀಡಲು ಮುಂದಾಗಿದ್ದಾರೆ 32 ವರ್ಷದ ಗೌರಿ.

ವೈರಲ್ ಆಯ್ತು ವಿಡಿಯೋ:
ಎರಡೂವರೆ ವರ್ಷದ ಹಿಂದೆ ನಡೆದ ಆ ಘಟನೆ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದು, ಗೌರಿಯ ಧೈರ್ಯದ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಎಎನ್​ಐಗೆ ನೀಡಿರುವ ಸಂದರ್ಶನದಲ್ಲಿ ಗಣೇಶ್​ ಜೊತೆಗಿನ ತಮ್ಮ ಪ್ರೀತಿ, ಪ್ರಪೋಸಲ್, ಮದುವೆ, ಅವರ ಅಗಲಿಕೆಯ ಬಗ್ಗೆ ಮಾತನಾಡಿರುವ ಗೌರಿ ಮಹಾದಿಕ್​ ಅವರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

‘ನಾನು ಮತ್ತು ಗಣೇಶ್​ ಇಬ್ಬರೂ ಹೇಗೆ ಜೋಡಿಯಾದೆವೋ ಗೊತ್ತಿಲ್ಲ. ನಾನು ತುಂಬ ಮಾತುಗಾತಿ. ಅವರೋ ಬಹಳ ಸೈಲೆಂಟ್. ಮನೆಯಿಂದ ಕೆಲಸಕ್ಕೆ ಹೋದ ನಂತರ ಅಲ್ಲಿನ ಯಾವ ವಿಷಯವನ್ನೂ ನಮ್ಮೊಂದಿಗೆ ಹೇಳಿಕೊಳ್ಳುತ್ತಿರಲಿಲ್ಲ. ನಮಗೆ ಆತಂಕವಂತೂ ಇದ್ದೇ ಇತ್ತು. ಆದರೂ ಅವರು ಎಲ್ಲವೂ ಆರಾಮಾಗಿದೆ, ನಾನು ಚೆನ್ನಾಗೇ ಇದ್ದೇನೆ ಎಂದು ಹೇಳುತ್ತಿದ್ದರು. ಅದು ಸುಳ್ಳು ಎಂದು ನನಗೆ ಗೊತ್ತಾಗುತ್ತಿತ್ತು’ ಎಂದು ಸಂದರ್ಶನದಲ್ಲಿ ಗೌರಿ ಹೇಳಿಕೊಂಡಿದ್ದಾರೆ.

ನನ್ನ ಗಂಡನೂ ಹೆಮ್ಮೆ ಪಡುತ್ತಿರುತ್ತಾರೆ:
‘ನನ್ನ ಗಂಡನಿಗೆ ಸೇನೆಯಲ್ಲಿ ಹೆಚ್ಚು ದಿನ ಸೇವೆ ಸಲ್ಲಿಸಲು ಅವಕಾಶ ಸಿಗಲೇ ಇಲ್ಲ. ಹಾಗಾಗಿ, ನಾನೂ ಸೇನೆಗೆ ಸೇರಿ ಅವರ ಉದ್ದೇಶವನ್ನು ಪೂರ್ಣಗೊಳಿಸಬೇಕೆಂದು ನಿರ್ಧರಿಸಿದೆ. ಹಾಗಾಗಿಯೇ 2 ವರ್ಷಗಳ ಹಿಂದೆ ಎಸ್​ಎಸ್​ಬಿ ಪರೀಕ್ಷೆ ತೆಗೆದುಕೊಂಡೆ. ಮೊದಲ ಪ್ರಯತ್ನದಲ್ಲಿ ಫೇಲಾದೆ. ಈಗ ನಾನು ತೇರ್ಗಡೆಯಾಗಿದ್ದೇನೆ. ಇನ್ನೂ 49 ವಾರಗಳ ಕಾಲ ಚೆನ್ನೈನಲ್ಲಿ ನನಗೆ ತರಬೇತಿ ನೀಡಲಾಗುತ್ತದೆ. ಮುಂದಿನ ವರ್ಷ ನಾನು ಸೇನೆಗೆ ಸೇರಿಕೊಳ್ಳಲಿದ್ದೇನೆ. ಅವರ ಯೂನಿಫಾರಂ ಧರಿಸಿ, ಅವರ ಸ್ಟಾರ್​ಗಳನ್ನು ಧರಿಸಿ ನಾನೇ ಅವರಾಗಿ ಬಾಳಲಿದ್ದೇನೆ. ಅದಕ್ಕಿಂತಲೂ ಖುಷಿಯ ವಿಷಯ ಬೇರೇನಿದೆ? ನನ್ನ ಈ ನಿರ್ಧಾರವನ್ನು ನೋಡಿ ಗಣೇಶ್​ ಕೂಡ ಹೆಮ್ಮೆ ಪಡುತ್ತಿರುತ್ತಾರೆ’ ಎಂದು ಭಾವುಕರಾಗುತ್ತಾರೆ ಗೌರಿ ಮಹಾದಿಕ್.

Comments are closed.