ರಾಷ್ಟ್ರೀಯ

ವಿಂಗ್​ ಕಮಾಂಡರ್ ಅಭಿನಂದನ್​ ಪಕ್ಕೆಲುಬು ಮುರಿತ

Pinterest LinkedIn Tumblr


ನವದೆಹಲಿ: ಮೊನ್ನೆ ರಾತ್ರಿ ಪಾಕಿಸ್ತಾನದಿಂದ ಭಾರತಕ್ಕೆ ಹಸ್ತಾಂತರಗೊಂಡಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಅವರನ್ನು ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಪಾಕಿಸ್ತಾನದ ಸ್ಥಳೀಯರಿಂದ ತೀವ್ರವಾಗಿ ಹಲ್ಲೆಗೊಳಗಾದ ಕಾರಣ ಪಕ್ಕೆಲುಬು ಮುರಿದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

60 ಗಂಟೆಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ವರ್ತಮಾನ್​ ಅವರು ಸದ್ಯಕ್ಕೆ ವಿಶ್ರಾಂತಿಯಲ್ಲಿದ್ದಾರೆ. ಪಾಕಿಸ್ತಾನದ ಎಫ್​- 16 ಯುದ್ಧವಿಮಾನವನ್ನು ಹಿಮ್ಮೆಟ್ಟಿಸುವ ಭರದಲ್ಲಿ ಪಾಕಿಸ್ತಾನದೊಳಗೆ ಬಿದ್ದಿದ್ದ ಮಿಗ್​- 21 ಯುದ್ಧವಿಮಾನವನ್ನು ಚಲಾಯಿಸುತ್ತಿದ್ದ ಐಎಎಫ್​ ಪೈಲಟ್ ಅಭಿನಂದನ್​ ಅವರಿಗೆ ಅಲ್ಲಿನ ಸ್ಥಳೀಯರು ಹಲ್ಲೆ ಮಾಡಿದ್ದ ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು. ಆ ಘಟನೆಯಲ್ಲಿ ಅಭಿನಂದನ್​ ಅವರ ಪಕ್ಕೆಲುಬಿಗೆ ತೀವ್ರ ಹಾನಿಯಾಗಿರುವುದಾಗಿ ಎಂಆರ್​ಐ ಸ್ಕ್ಯಾನಿಂಗ್​ನಲ್ಲಿ ತಿಳಿದುಬಂದಿದೆ.

ಅಭಿನಂದನ್​ ಅವರ ಬಲಗಣ್ಣಿಗೂ ತೀವ್ರ ಗಾಯಗಳಾಗಿದ್ದು, ಇನ್ನೂ ಕೆಲವು ವೈದ್ಯಕೀಯ ತಪಾಸಣೆಗಳು ಬಾಕಿಯಿವೆ. ದೆಹಲಿ ಕಂಟೋನ್ಮೆಂಟ್​ನಲ್ಲಿರುವ ರಿಸರ್ಚ್​ ಆ್ಯಂಡ್​ ರೆಫರಲ್ ಹಾಸ್ಪಿಟಲ್​ನಲ್ಲಿ ಅಭಿನಂದನ್​ ತಪಾಸಣೆ ನಡೆಸಲಾಗುತ್ತಿದೆ. ಭಾರತದ ಗಡಿಯೊಳಗೆ ಬಂದ ಕೂಡಲೆ ಅವರನ್ನು ಏರ್​ಪೋರ್ಸ್​ ಸೆಂಟ್ರಲ್ ಮೆಡಿಕಲ್ ಎಸ್ಟಾಬ್ಲಿಷ್​ಮೆಂಟ್​ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು.

ಪಾಕ್​ ಸೇನೆಗೆ ಭಾರತದ ಯಾವುದೇ ಗೌಪ್ಯ ವಿಚಾರಗಳನ್ನು ಬಿಟ್ಟುಕೊಡದೆ ದೇಶಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಎರಡೂವರೆ ದಿನಗಳ ಕಾಲ ಶತ್ರು ರಾಷ್ಟ್ರದಲ್ಲಿದ್ದ ಅಭಿನಂದನ್​ ಅವರ ಧೈರ್ಯಕ್ಕೆ ದೇಶದ ರಾಜಕಾರಣಿಗಳು, ಸೇನಾಧಿಕಾರಿಗಳು, ಸೆಲೆಬ್ರಿಟಿಗಳು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ನಿನ್ನೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಕೂಡ ಅಭಿನಂದನ್​ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು.

Comments are closed.