ರಾಷ್ಟ್ರೀಯ

ಮಸೂದ್​ ಅಜರ್​ ಕ್ಯಾನ್ಸರ್​ಗೆ ಬಲಿ?: ಈತನ ಸಾವನ್ನು ದೃಢಪಡಿಸದ ಜೈಶ್​-ಇ-ಉಗ್ರ ಸಂಘಟನೆ..

Pinterest LinkedIn Tumblr


ನವದೆಹಲಿ: ಪುಲ್ವಾಮ ಬಾಂಬ್​ ದಾಳಿಯ ಮಾಸ್ಟರ್​ ಮೈಂಡ್ ಹಾಗೂ ಭಾರತದಲ್ಲಿ ಹಲವಾರು ಉಗ್ರ ಕೃತ್ಯಗಳನ್ನು ಎಸಗಿದ್ದ ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್​ ಅಜರ್​ ಲಿವರ್​ ಕ್ಯಾನ್ಸರ್​ನಿಂದ ಇಸ್ಲಾಮಾಬಾದ್​ನಲ್ಲಿ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ, ಈತ ಸತ್ತಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಂದಿಲ್ಲ. ಈತನ ಕುಕೃತ್ಯದಿಂದಾಗಿ ಭಾರತ ಮತ್ತು ಪಾಕ್​ ನಡುವೆ ಎರಡು ದಿನ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.

ಮಸೂದ್​ ಅಜರ್​ ಇಸ್ಲಾಮಾಬಾದ್​ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ವರದಿಗಳು ಹೇಳುವ ಪ್ರಕಾರ ಈತ ಶನಿವಾರ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದಾಗ್ಯೂ ಪಾಕಿಸ್ತಾನ ಅಥವಾ ಜೈಶ್​-ಇ-ಉಗ್ರ ಸಂಘಟನೆ ಈತನ ಸಾವನ್ನು ದೃಢಪಡಿಸಿಲ್ಲ.

ಮಾರ್ಚ್​ 1ರಂದು ಸಿಎನ್​ಎನ್​ಗೆ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್​ ಖುರೇಷಿ ನೀಡಿದ ಸಂದರ್ಶನದಲ್ಲಿ ಮಸೂದ್​ ಅಜರ್​ ತಮ್ಮ ದೇಶದಲ್ಲಿಯೇ ಇರುವುದನ್ನು ಒಪ್ಪಿಕೊಂಡಿದ್ದರು. ಮತ್ತು ಆತ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದರು.

“ನನಗೆ ಬಂದ ಮಾಹಿತಿ ಪ್ರಕಾರ, ಮಸೂದ್​ ಪಾಕಿಸ್ತಾನದಲ್ಲಿಯೇ ಇದ್ದಾನೆ. ಮತ್ತು ಆತ ಮನೆಯನ್ನು ಬಿಟ್ಟು ಹೋಗಲಾರದಷ್ಟು ಅನಾರೋಗ್ಯದಿಂದ ಬಳಲುತ್ತಿದ್ದಾನೆ. ಭಾರತ ಸರ್ಕಾರ ಮಸೂದ್​ ವಿರುದ್ಧ ಸರಿಯಾದ ಮತ್ತು ಬಲವಾದ ಸಾಕ್ಷ್ಯವನ್ನು ನೀಡಿದರೆ ಮಾತ್ರ ಪಾಕಿಸ್ತಾನ ಸರ್ಕಾರ ಮಸೂದ್​ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ,” ಎಂದು ಸಂದರ್ಶನದಲ್ಲಿ ಖುರೇಷಿ ತಿಳಿಸಿದ್ದರು.

ಪುಲ್ವಾಮದಲ್ಲಿ ಬಾಂಬ್​ ಸ್ಫೋಟದಿಂದಾಗಿ 40 ಸಿಆರ್​ಪಿಎಫ್​ ಯೋಧರು ಹುತಾತ್ಮರಾದರು. ಈ ದಾಳಿಯ ಹೊಣೆಯನ್ನು ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಆನಂತರ ಈ ಸಂಘಟನೆಯ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸುವಂತೆ ಭಾರತ ವಿಶ್ವಸಂಸ್ಥೆಯಲ್ಲಿ ಪ್ರಯತ್ನಿಸಿತ್ತು.

ಯಾರು ಈ ಮಸೂದ್​ ಅಜರ್​?

ಮಸೂದ್​ ಅಜರ್​ 1968ರಂದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಬಹವಲ್​ಪುರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನ ಮಗನಾಗಿ ಜನಿಸಿದ್ದ.

ಅಜರ್​ ಜಮ್ಮು ಮತ್ತು ಕಾಶ್ಮೀರವನ್ನು ಪೋರ್ಚುಗೀಸ್​ ಪಾಸ್​ಪೋರ್ಟ್​ ಮೇಲೆ ಪ್ರವೇಶಿಸಿದ್ದ ಮತ್ತು ಇಲ್ಲಿ ಉಗ್ರ ಸಂಘಟನೆಯನ್ನು ಸ್ಥಾಪಿಸಿದ್ದ. ಭಯೋತ್ಪಾದನಾ ಕೃತ್ಯ ನಡೆಸಿದ ಪ್ರಕರಣದಲ್ಲಿ ಈತನನ್ನು ಭಾರತ 1994ರಲ್ಲಿ ಬಂಧಿಸಿತ್ತು.

ಜೈಲಿನಲ್ಲಿದ್ದಾಗ ಈತ ಮತ್ತು ಇತರ ಉಗ್ರರು ಸುರಂಗದ ಮೂಲಕ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಸುರಂಗದೊಳಗೆ ಮೊದಲು ಮಸೂದ್​ ಅಜರ್​ ಮುಂದೆ ಹೋಗುತ್ತಿದ್ದ. ಆದರೆ, ಅವನ ಬೃಹತ್ ಮೈಕಟ್ಟಿನ ಕಾರಣದಿಂದ ಕಿರಿದಾದ ಸುರಂಗದಲ್ಲಿ ಸಿಲುಕಿಕೊಂಡ. ಆಗ ಆತನನ್ನು ಮತ್ತೆ ಬಂಧಿಸಿ ಕರೆತರಲಾಯಿತು ಎಂದು ಅಧಿಕಾರಿಗಳು ಹೇಳುತ್ತಾರೆ.

ಅದಾದ ಐದು ವರ್ಷಗಳ ಕಾಲವೂ ಆತ ಜೈಲಿನಲ್ಲೇ ಇದ್ದ. ಆದರೆ, 1999ರಲ್ಲಿ ಮಸೂದ್ ಅಜರ್​ನ ಸಹೋದರ ಇಬ್ರಾಯಿಂ ಅಥಾರ್​ ಅಂದು ತಾಲಿಬಾನ್​ ಆಡಳಿತವಿದ್ದ ಕಂದಾಹಾರ್​ನಲ್ಲಿ ಭಾರತದ ವಿಮಾನವನ್ನು ಅಪಹರಣ ಮಾಡಿದ್ದ. ನಂತರ ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡು, ಮಸೂದ್​ ಅಜರ್​ ಸೇರಿ ಇತರ ಉಗ್ರರನ್ನು ಬಿಡುಗಡೆ ಮಾಡುವಂತೆ ಷರತ್ತು ವಿಧಿಸಿ, ತನ್ನ ಅಣ್ಣನನ್ನು ಭಾರತದ ಜೈಲಿನಿಂದ ಬಿಡಿಸಿಕೊಂಡಿದ್ದ.

Comments are closed.