ರಾಷ್ಟ್ರೀಯ

ಇಂಡಿಯಾದ ವಿರುದ್ಧ ಎಫ್-16 ಅಸ್ತ್ರ ಪ್ರಯೋಗಿಸಿದ್ದು ಪಾಕ್ ಪಾಲಿಗೆ ಕಂಟಕವಾಗುತ್ತಾ?

Pinterest LinkedIn Tumblr


ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿಭಾಗದ ಜಟಾಪಟಿಯಲ್ಲಿ ಎರಡೂ ದೇಶಗಳು ಪರಸ್ಪರ ವೈಮಾನಿಕ ದಾಳಿ ನಡೆಸಿವೆ. ಪುಲ್ವಾಮ ಉಗ್ರ ದಾಳಿಯ ನಂತರ ಭಾರತೀಯ ವಾಯುಪಡೆಯ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್​ನಲ್ಲಿನ ಜೈಷ್ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿ ನಾಶ ಮಾಡಿದವು. ಅದಾದ ಬಳಿಕ ಪಾಕಿಸ್ತಾನವು ಪ್ರತ್ಯುತ್ತರವಾಗಿ ಭಾರತದ ಗಡಿಭಾಗದತ್ತ ವೈಮಾನಿಕ ದಾಳಿ ನಡೆಸಿತು. ಅದಕ್ಕಾಗಿ ಅಮೆರಿಕದಿಂದ ಆಮದುಗೊಂಡ ಎಫ್-16 ಯುದ್ಧವಿಮಾನವನ್ನು ಬಳಕೆ ಮಾಡಿತೆಂಬ ಮಾಹಿತಿ ಇದೆ. ನೆಲಕ್ಕೆ ಬಿದ್ದಿರುವ ವಿಮಾನದ ಅವಶೇಷವೊಂದು ಎಫ್-16 ವಿಮಾನದ ಸುಳಿವು ಕೊಡುತ್ತಿದೆ ಎಂದೆನ್ನಲಾಗುತ್ತಿದೆ. ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್ ಅವರಿದ್ದ ಮಿಗ್ ಯುದ್ಧವಿಮಾನವೇ ಎಫ್-16 ವಿಮಾನವನ್ನು ಹೊಡೆದುರುಳಿಸಿತೆನ್ನಲಾಗಿದೆ. ಭಾರತದ ಮಿಲಿಟರಿ ನೆಲೆಗಳನ್ನ ಗುರಿಯಾಗಿಸಿಕೊಂಡು ಎಫ್-16 ಯುದ್ಧವಿಮಾನದಿಂದ ದಾಳಿ ನಡೆಸಲಾಯಿತೆಂಬುದು ಭಾರತದ ಆರೋಪ. ಒಂದು ವೇಳೆ, ಇದು ನಿಜವೆಂದು ಸಾಬೀತಾದರೆ ಪಾಕಿಸ್ತಾನಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಅಮೆರಿಕದಿಂದ ಆಮದಾದ ಎಫ್-16 ಯುದ್ಧವಿಮಾನ ಅತ್ಯಂತ ಶಕ್ತಿಶಾಲಿಯಾಗಿದ್ದು, ಅದರ ಮುಂದೆ 70ರ ದಶಕದ ರಷ್ಯಾ ನಿರ್ಮಿತ ಮಿಗ್ ಯುದ್ಧವಿಮಾನ ಯಾವುದಕ್ಕೂ ಸಮವಲ್ಲ. ಆದರೂ ಎಫ್-16 ಎದುರು ಮಿಗ್ ಸಾಮರ್ಥ್ಯ ತೋರಲು ಭಾರತದ ಪೈಲಟ್​ಗಳ ಸಾಹಸ ಮತ್ತು ಧೈರ್ಯವನ್ನು ಮೆಚ್ಚಲೇಬೇಕು. ಆದರೆ, ಎಫ್-16 ವಿಮಾನವನ್ನು ಪಾಕಿಸ್ತಾನಕ್ಕೆ ಕೊಡುವಾಗ ಅಮೆರಿಕದವರು ಕೆಲ ಕಂಡೀಷನ್ಸ್ ಹಾಕಿದ್ದರು. ಈ ಅಸ್ತ್ರವನ್ನು ಆತ್ಮರಕ್ಷಣೆಗೆ, ಅಂದರೆ ಡಿಫೆನ್ಸ್​ಗೆ ಮಾತ್ರ ಉಪಯೋಗಿಸಬೇಕು. ಯಾವುದೇ ಕಾರಣಕ್ಕೂ ದಾಳಿ ಮಾಡಲು ಉಪಯೋಗಿಸುವಂತಿಲ್ಲ ಎಂಬ ನಿಯಮವಿದೆ.

ಈಗ ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಲು ಎಫ್-16 ಯುದ್ಧವಿಮಾನ ಉಪಯೋಗಿಸಿದ್ದು ರುಜುವಾತಾದರೆ ಅಮೆರಿಕದವರು ಪಾಕಿಸ್ತಾನವನ್ನು ಕಟ್ಟಿಹಾಕುವ ಸಾಧ್ಯತೆ ಇದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಸಹಾಯವಾಗಲೆಂದು ನೀಡಿದ್ದ ಈ ಎಫ್-16 ವಿಮಾನವನ್ನು ನೆರೆಯ ರಾಷ್ಟ್ರದ ಮೇಲೆ ವಿನಾಕಾರಣ ದಾಳಿ ಮಾಡುವುದಕ್ಕೆ ಉಪಯೋಗಿಸಿದ್ದೇಕೆಂದು ಅಮೆರಿಕ ಆಕ್ಷೇಪ ವ್ಯಕ್ತಪಡಿಸಬಹುದು. ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲೂ ಮುಂದಾಗಬಹುದು. ಆಫ್ಘಾನಿಸ್ತಾನ ವಿಚಾರದಲ್ಲಿ ಪಾಕಿಸ್ತಾನದ ಮೇಲೆ ಈ ಮೊದಲೇ ಮುನಿಸಿಕೊಂಡಿರುವ ಅಮೆರಿಕಕ್ಕೆ ಈಗ ಹೊಸ ಕಾರಣವೊಂದು ಸಿಕ್ಕಂತಾಗಿದೆ. ಈ ಎಫ್-16 ವಿಮಾನದ ವಿಚಾರವನ್ನು ಭಾರತ ಅಮೆರಿಕದೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಇನ್ನು, ಭಾರತದಲ್ಲಿ ಭಯೋತ್ಪಾದನೆ ನಡೆಸುವ ಉಗ್ರರು ಪಾಕಿಸ್ತಾನದಲ್ಲಿದ್ದಾರೆಂಬುದಕ್ಕೆ ಏನಾದರೂ ಪುರಾವೆ ಇದ್ದರೆ ಕೊಡಿ ಎನ್ನುತ್ತಿರುವ ಪಾಕಿಸ್ತಾನಕ್ಕೆ ಭಾರತ ಈಗಾಗಲೇ ಸಾಕಷ್ಟು ಬಾರಿ ಪುರಾವೆಗಳನ್ನು ಒದಗಿಸಿಯಾಗಿದೆ. ಜೈಷ್-ಎ-ಮೊಹಮ್ಮದ್ ಮತ್ತಿತರ ಸಂಘಟನೆಗಳು ಎಸಗಿರುವ ಪಾಪ ಕೃತ್ಯಗಳು ಹಾಗೂ ಅವುಗಳು ಪಾಕಿಸ್ತಾನದಲ್ಲಿ ನೆಲಸಿರುವುದಕ್ಕೆ ಅನೇಕ ಸಾಕ್ಷ್ಯಾಧಾರಗಳನ್ನ ಭಾರತ ನೀಡಿದೆ. ತಮ್ಮ ಕಣ್ಮುಂದೆಯೇ ರಾಜಾರೋಷವಾಗಿ ಈ ಉಗ್ರರು ತಿರುಗಾಡುತ್ತಿದ್ದರೂ ಪಾಕಿಸ್ತಾನ ಕಣ್ಣಿದ್ದೂ ಕುರುಡನಂತೆ ವರ್ತಿಸುತ್ತಿದೆ ಎಂಬುದು ಭಾರತದ ಆರೋಪ. ಹಾಗೆಯೇ, ಬಾಂಬ್ಲಾದೇಶಕ್ಕೆ ಕೆಲವೇ ವರ್ಷಗಳಲ್ಲಿ ಉಗ್ರರ ನೆಲೆಗಳನ್ನು ಹೊಸಕಿಹಾಕಲು ಸಾಧ್ಯವಾಗಾಗಿರುವಾಗ ಪಾಕಿಸ್ತಾನಕ್ಕೆ ಯಾಕೆ ಸಾಧ್ಯವಿಲ್ಲ? ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಪ್ರಾಮಾಣಿಕವಾಗಿರಬೇಕು ಎಂಬುದು ಅನೇಕ ರಾಷ್ಟ್ರಗಳ ಅಭಿಪ್ರಾಯವಾಗಿದೆ.

ಇವತ್ತು ಪಾಕ್ ಪ್ರಧಾನಿ ಇಮ್ರಾನ್ ಅವರು ತಮ್ಮ ಸಂಸತ್ತಿನ ಅಧಿವೇಶನವನ್ನುದ್ದೇಶಿಸಿ ಮಾತನಾಡುತ್ತಾ, ಭಾರತವು ಕಾಶ್ಮೀರಿಗಳ ಸ್ವಾತಂತ್ರ್ಯ ಹೋರಾಟಕ್ಕೆ ಮನ್ನಣೆ ಕೊಡುತ್ತಿಲ್ಲ. ಇದು ಭಾರತ-ಪಾಕ್ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಹೇಳಿದ್ದರು. ಆದರೆ, ಬಲೂಚಿಸ್ತಾನ, ಖೈಬರ್ ಪಖ್ತುಂಕ್ವ, ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಬೇಡಿಕೆ ಇಟ್ಟಿದ್ದ ಜನರನ್ನು ಪಾಕಿಸ್ತಾನ ಸರಕಾರ ದಮನ ಮಾಡುತ್ತಿದೆ ಎಂಬ ಆರೋಪ ಇದೆ. ಪಾಕಿಸ್ತಾನವು ಕಾಶ್ಮೀರದ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದಾಗೆಲ್ಲಾ ಬಲೂಚಿಸ್ತಾನದ ವಿಚಾರ ಮುನ್ನೆಲೆಗೆ ಬಂದೇ ಬರುತ್ತದೆ. ಇದೂ ಕೂಡ ಪಾಕಿಸ್ತಾನಕ್ಕೆ ಹಿಂದೇಟು ಕೊಡಲಿದೆ.

Comments are closed.