ರಾಷ್ಟ್ರೀಯ

ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಮರಳಿದ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್; ಅದ್ಧೂರಿ ಸ್ವಾಗತ

Pinterest LinkedIn Tumblr

ನವದೆಹಲಿ: ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್‍ ಕಮಾಂಡರ್ ಅಭಿನಂದನ್‍ ವರ್ಧಮಾನ್‍ ಅವರು ಶುಕ್ರವಾರ ಸಂಜೆ ವಾಘಾ ಗಡಿಯ ಮೂಲಕ ತಾಯ್ನಾಡಿಗೆ ಮರಳಿದ್ದಾರೆ.

ಭಾರತ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಸುರಕ್ಷಿತವಾಗಿ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಅವರು ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.

ಸ್ಥಳದಲ್ಲಿದ್ದ ಐಎಎಫ್ ಅಧಿಕಾರಿಗಳು ಸೇರಿ ಅನೇಕ ದೇಶಾಭಿಮಾನಿಗಳು ದೇಶದ ಹೆಮ್ಮೆಯ ಪುತ್ರ ಅಭಿನಂದನ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು. ಬಳಿಕ ಅವರನ್ನು ಅಮೃತಸರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆ ನಂತರ ಐಎಫ್ಎಫ್ ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗುತ್ತಿದೆ.

ಇನ್ನು ವಾಘಾ ಗಡಿಯಲ್ಲಿ ಅಭಿನಂದನ್ ಅವರ ಸ್ವಾಗತಕ್ಕೆ ಆಗಮಿಸಬೇಕಾಗಿದ್ದ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು, ಕಾರಣಾಂತರದಿಂದ ಬರಲಾಗಲಿಲ್ಲ ಎಂದು ಹೇಳಿದ್ದು, ಟ್ವಿಟ್ ಮೂಲಕ ತಮ್ಮ ಶುಭಾಶಯ ತಿಳಿಸಿದ್ದಾರೆ.

ಶಾಂತಿಯ ಧ್ಯೋತಕವಾಗಿ ವಿಂಗ್ ಕಮಾಂಡ್‍ ಅಭಿನಂದನ್‍ ಅವರನ್ನು ಭಾರತಕ್ಕೆ ಒಪ್ಪಿಸುವುದಾಗಿ ನಿನ್ನೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‍ ಖಾನ್‍ ಸಂಸತ್‍ನಲ್ಲಿ ಘೋಷಣೆ ಮಾಡುತ್ತಿದ್ದಂತೆ ಅಲ್ಲಿನ ಸದಸ್ಯರು ಮೇಜು ಕಟ್ಟು ಈ ನಿರ್ಧಾರವನ್ನು ಸ್ವಾಗತ ಮಾಡಿದ್ದರು.

ಜಿನೆವಾ ಒಪ್ಪಂದದ ಅನುಸಾರವಾಗಿ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್‍ ಅವರನ್ನು ಪಾಕಿಸ್ತಾನ ಬಿಡುಗಡೆ ಮಾಡುತ್ತಿದೆ ಎಂದು ಗುರುವಾರ ವಾಯುಪಡೆಯ ಹಿರಿಯ ಅಧಿಕಾರಿ ಏರ್ ವೈಸ್ ಮಾರ್ಷಲ್‍ ಆರ್ ಜಿಕೆ ಕಪೂರ್ ಸುದ್ದಿಗಾರರಿಗೆ ತಿಳಿಸಿದ್ದರು.

Comments are closed.