ರಾಷ್ಟ್ರೀಯ

ಕಾಶ್ಮೀರಕ್ಕೆ 10 ಸಾವಿರ ಹೆಚ್ಚುವರಿ ಸೈನಿಕರ ರವಾನೆ

Pinterest LinkedIn Tumblr


ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯನ್ನು ನಿಗ್ರಹಿಸಲು ಕಾರ್ಯಾಚರಣೆ ನಡೆಸುತ್ತಿರುವ ಸೇನೆಗೆ ನೆರವಾಗಲು 10 ಸಾವಿರಕ್ಕೂ ಹೆಚ್ಚು ಯೋಧರನ್ನು ಕಾಶ್ಮೀರಕ್ಕೆ ಕಳುಹಿಸಲಾಗಿದೆ. ಕೇಂದ್ರ ಸರಕಾರವು ಅರೆಸೇನಾ ಪಡೆಗಳಿಗೆ ಸೇರಿದ ಹೆಚ್ಚುವರಿ 100 ಕಂಪನಿಗಳನ್ನ ತುರ್ತಾಗಿ ಕಾಶ್ಮೀರಕ್ಕೆ ಕಳುಹಿಸಿದೆ. ಸಿಆರ್​ಪಿಎಫ್​ನ 45, ಬಿಎಸ್​ಎಫ್​ನ 35, ಎಸ್​ಎಸ್​ಬಿಯ 10 ಹಾಗೂ ಐಟಿಬಿಪಿಯ 10 ಮಿಲಿಟರಿ ಕಂಪನಿಗಳು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಆದೇಶದ ನಂತರ ಕಾಶ್ಮೀರಕ್ಕೆ ದೌಡಾಯಿಸಿವೆ. ಸೇನೆಯ ವ್ಯವಸ್ಥೆಯಲ್ಲಿ ಒಂದು ಕಂಪನಿಯಲ್ಲಿ ಸುಮಾರು 100 ಸೈನಿಕರಿರುತ್ತಾರೆ. ಅಲ್ಲಿಗೆ ಅರೆಸೇನಾ ಪಡೆಗಳಿಂದ ಅಂದಾಜು 10 ಸಾವಿರ ಯೋಧರು ಉಗ್ರರ ವಿರುದ್ಧ ಕಾರ್ಯಾಚರಣೆಗೆ ಜೊತೆಗೂಡಲಿದ್ದಾರೆ.

ಪುಲ್ವಾಮ ಉಗ್ರ ದಾಳಿ ಘಟನೆ ನಂತರ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಸೇನೆ ಕಠಿಣ ಕಾರ್ಯಾಚರಣೆ ನಡೆಸುತ್ತಿದೆ. ದಾಳಿಯಾಗಿ ಕೇವಲ 100 ಗಂಟೆಯೊಳಗೆ ದಾಳಿಯ ಮೂರು ಮಾಸ್ಟರ್​ಮೈಂಡ್​ಗಳನ್ನು ಎನ್​ಕೌಂಟರ್​ನಲ್ಲಿ ಕೊಂದು ಹಾಕಿದೆ. ಆ ನಂತರ ಹುರಿಯತ್, ಜೆಕೆಎಲ್​ಎಫ್, ಜಮಾತ್-ಎ-ಇಸ್ಲಾಮೀ ಮೊದಲಾದ ಪ್ರತ್ಯೇಕತಾವಾದಿ ಸಂಘಟನೆಗಳ ಮುಖಂಡರನ್ನು ಬಂಧಿಸುವ ಕೆಲಸ ನಡೆದಿದೆ. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಹೋರಾಟಗಾರರನ್ನು ಬಂಧಿಸಿರುವುದಾಗಿ ಕೇಂದ್ರ ಸರಕಾರ ಹೇಳಿದೆ. ಹಾಗೆಯೇ, ಹೆಚ್ಚುವರಿ ತುಕಡಿಗಳ ನಿಯೋಜನೆ ಕೂಡ ಲೋಕಸಭೆ ಚುನಾವಣೆಗೋಸ್ಕರ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಮಾತ್-ಎ-ಇಸ್ಲಾಮೀ ಸಂಘಟನೆಯು ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ರಾಜಕೀಯ ಅಂಗವೆಂದು ಪರಿಗಣಿಸಲಾಗಿದೆ. ದಕ್ಷಿಣ ಕಾಶ್ಮೀರದ ವಿವಿಧೆಡೆ ಈ ಸಂಘಟನೆಗೆ ಸೇರಿದ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಜೆಕೆಎಲ್​ಎಫ್ (ಜಮ್ಮುಕಾಶ್ಮೀರ ಲಿಬರೇಶನ್ ಫ್ರಂಟ್) ಮುಖಂಡ ಯಾಸೀನ್ ಮಲಿಕ್ ಕೂಡ ಸೇರಿದ್ಧಾರೆ.

ಕಾಶ್ಮೀರೀ ಮುಖಂಡರನ್ನು ಬಂಧಿಸಿದ ಸರಕಾರದ ಕ್ರಮಕ್ಕೆ ಕಾಶ್ಮೀರದ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಾಶ್ಮೀರಿಗಳನ್ನು ಬಂಧಿಸಬಹುದೇ ಹೊರತು ಕಾಶ್ಮೀರೀ ಚಿಂತನೆಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎಂದು ಒಮರ್ ಅಬ್ದುಲ್ಲಾ ಮೊದಲಾದವರು ಟೀಕಿಸಿದ್ದಾರೆ.

ಕಾಶ್ಮೀರದಲ್ಲಿ ತುರ್ತಾಗಿ ಸೇನಾ ತುಕಡಿಗಳನ್ನು ನಿಯೋಜಿಸುತ್ತಿರುವುದರ ಬಗ್ಗೆಯೂ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಇಷ್ಟು ಸೈನಿಕರನ್ನು ಕಾಶ್ಮೀರಕ್ಕೆ ಕರೆತರಲಾಗುತ್ತಿದೆ ಎಂಬ ಅಭಿಪ್ರಾಯಗಳು ಬರುತ್ತಿವೆ. ಆದರೆ, ಕಣಿವೆ ರಾಜ್ಯದ ಪೊಲೀಸ್ ಅಧಿಕಾರಿಗಳು ಈ ಯುದ್ಧದ ಕಾರ್ಮೋಡ ಸ್ಥಿತಿಯನ್ನು ತಳ್ಳಿಹಾಕಿದ್ದಾರೆ.

12 ಸಾವಿರ ಸೈನಿಕರೊಂದಿಗೆ ನಾವು ಯುದ್ಧ ಮಾಡಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯ ವೇಳೆ ದಿಢೀರನೇ ಸೈನಿಕರನ್ನು ಕರೆಸಿದರೆ ಪ್ರಯೋಜನವಿಲ್ಲ. ಅವರು ಇಲ್ಲಿಯ ಪರಿಸ್ಥಿತಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಮತ್ತು ತರಬೇತಿ ಬೇಕಾಗುತ್ತದೆ. ಅದಕ್ಕೆ ಈಗಲೇ ಅವರನ್ನು ಇಲ್ಲಿಗೆ ಕರೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ನ್ಯೂಸ್18 ವಾಹಿನಿಗೆ ಮಾಹಿತಿ ನೀಡಿದ್ಧಾರೆ.

Comments are closed.