ರಾಷ್ಟ್ರೀಯ

ಅಸ್ಸಾಂ ಕಳ್ಳಬಟ್ಟಿ ದುರಂತ: ಸಾವಿನ ಸಂಖ್ಯೆ 102ಕ್ಕೇರಿಕೆ; ಪ್ರತೀ 10 ನಿಮಿಷಕ್ಕೊಂದು ಸಾವು?

Pinterest LinkedIn Tumblr


ಗುವಾಹತಿ: ಅಸ್ಸಾಮ್​ನಲ್ಲಿ ನಿನ್ನೆ ಸಂಭವಿಸಿದ ಕಳ್ಳಬಟ್ಟಿ ಕುಡಿತ ದುರಂತದಲ್ಲಿ ಮಡಿದವರ ಸಂಖ್ಯೆ 102 ಮುಟ್ಟಿದೆ ಎಂದು ಇತ್ತೀಚಿನ ಮಾಹಿತಿ ಲಭಿಸಿದೆ. 300ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಭೀತಿ ಇದೆ. ಅಸ್ಸಾಮ್​ನ ಆರೋಗ್ಯ ಸಚಿವ ಹಿಮಂತ್ ಬಿಸ್ವಾ ಅವರ ಪ್ರಕಾರ ಪ್ರತೀ 10 ನಿಮಿಷಕ್ಕೊಮ್ಮೆ ಸರಾಸರಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರೆಲ್ಲರೂ ಗಂಭೀರ ಸ್ಥಿತಿಯಲ್ಲೇ ಇದ್ದು, ಕ್ಷಣಕ್ಷಣಕ್ಕೂ ಸಾವಿನ ಸಂಖ್ಯೆ ಏರುತ್ತಲೇ ಇದೆ.

ದೊಡ್ಡ ದುರಂತವೇನಂದರೆ ಸಲ್ಮಾರ ಟೀ ಗಾರ್ಡನ್ ಪ್ರದೇಶದಲ್ಲಿ ನಿನ್ನೆ ಕಳ್ಳಬಟ್ಟಿ ಕುಡಿದು ಇಷ್ಟೆಲ್ಲಾ ಸಾವು ನೋವು ಸಂಭವಿಸಿದ್ದರೂ ಈಗಲೂ ಕೂಡ ಬೇರೆ ಬೇರೆ ಕಡೆ ಕಳ್ಳಬಟ್ಟಿ ದುರಂತ ಪ್ರಕರಣಗಳು ನಡೆಯುತ್ತಲೇ ಇವೆ. ಸಲ್ಮಾರಾದ ದುರಂತ ಬೆಳಕಿಗೆ ಬರುವುದಕ್ಕೂ ಮುನ್ನ ಕಳ್ಳಬಟ್ಟಿ ಕುಡಿದಿದ್ದವರೆಲ್ಲರೂ ಭಯಭೀತಗೊಂಡು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಧಾವಿಸತೊಡಗಿದ್ದಾರೆನ್ನಲಾಗಿದೆ. ಅವರೆಲ್ಲರೂ ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಆಸ್ಪತ್ರೆಗೆ ದಾಖಲಾಗದೇ ಮನೆಗೆ ಮರಳಲು ಸಿದ್ಧವಾಗಿಲ್ಲ.

ಕಳ್ಳಬಟ್ಟಿ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಅಸ್ಸಾಮ್ ಸರಕಾರವು 2 ಲಕ್ಷ ರೂ ಪರಿಹಾರ ಒದಗಿಸಿದೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರಿಗೆ ಚಿಕಿತ್ಸೆಗೆಂದು 50 ಸಾವಿರ ರೂ ಸಹಾಯವನ್ನೂ ಒದಗಿಸಿದೆ. ಇದೇ ವೇಳೆ, ಕಳ್ಳಬಟ್ಟಿ ದುರಂತ ಪ್ರಕರಣದ ತನಿಖೆಗೆ ಸರಕಾರ ಆದೇಶಿಸಿದೆ. ಸಲ್ಮಾರ ಪ್ರದೇಶದ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಈ ಪ್ರಕರಣ ಸಂಬಂಧ ಈವರೆಗೆ 12ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಥಳೀಯರು ಹೇಳುವ ಪ್ರಕಾರ, ಅಕ್ರಮ ಮದ್ಯ ತಯಾರಕರ ಜೊತೆ ಅಬಕಾರಿ ಇಲಾಖೆಯೇ ಶಾಮೀಲಾಗಿರುವುದರಿಂದ ಕಳ್ಳಬಟ್ಟಿ ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲೂ ಕಳ್ಳಬಟ್ಟಿ ದುರಂತ ಸಂಭವಿಸಿ ಹತ್ತಾರು ಜನರು ಸಾವನ್ನಪ್ಪಿದ್ದರು. ಪಶ್ಚಿಮ ಬಂಗಾಳದಲ್ಲಿ 2011ರಲ್ಲಿ ಕಳ್ಳಬಟ್ಟಿ ಕುಡಿದು 172 ಜನರು ಸತ್ತ ದುರಂತದ ನೆನಪು ಹಲವರಿಗೆ ಇನ್ನೂ ಹಸಿಯಾಗಿಯೇ ಇದೆ. ಈಗ ಅಸ್ಸಾಮ್​ನಲ್ಲಿ ಸಂಭವಿಸಿರುವುದು ಅಷ್ಟೇ ತೀವ್ರತೆಯದ್ದಾಗಿದೆ.

Comments are closed.