ರಾಷ್ಟ್ರೀಯ

ರಜೆಯ ಬಳಿಕ ಸೇನೆಗೆ ಮರಳಲು ಮುಂದಾದ ಯೋಧ: ಪತಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿ ಪತ್ನಿ ಆತ್ಮಹತ್ಯೆ!

Pinterest LinkedIn Tumblr

ರಾಜ್ ಕೋಟ್: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಪ್ರಕರಣದಿಂದ ಭಯಗೊಂಡಿರುವ ಯೋಧನ ಪತ್ನಿ ತನ್ನ ಪತಿಗೂ ಇದೇ ರೀತಿ ಆಗಬಹುದೆಂಬ ಭೀತಿಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನಲ್ಲಿ ನಡೆದಿದೆ.

ದ್ವಾರಕಾದ ಜಿಲ್ಲೆಯ ಖಂಭಾಲಿಯಾ ನಗರದಲ್ಲಿ ಈ ಘಟನೆ ನಡೆದಿದ್ದು, ಮೀನಾಕ್ಷಿ ಜೆಟ್ವಾ (22) ಮೃತ ಯೋಧನ ಪತ್ನಿ. ಮೀನಾಕ್ಷಿ ಅವರು ತಮ್ಮ ಪತಿ ಭೂಪೇಂದ್ರ ಸಿಂಗ್ ಜೆಟ್ವಾ ಅವರ ಯೋಗೇಶ್ವರನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭೂಪೇಂದ್ರ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಗುಲ್‍ಮಾರ್ಗ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೇನೆಯಿಂದ ರಜೆ ಪಡೆದು ಮನೆಗೆ ಬಂದಿದ್ದರು.

ಈ ವೇಳೆ ಇತ್ತೀಚಿಗೆ ನಡೆದ ಹಿಮಪಾತದಲ್ಲಿ ಅದೃಷ್ಟವಶಾತ್ ನಾನು ಸಾವಿನಿಂದ ಬಚಾವಾದೆ ಎಂದು ಕುಟುಂಬದವರಿಗೆ ಹೇಳಿಕೊಂಡಿದ್ದಾರೆ. ಆದರೆ ಈ ವಿಚಾರ ಕೇಳಿದ ಪತ್ನಿ ಮೀನಾಕ್ಷಿ ಆತಂಕಗೊಂಡಿದ್ದರು. ಇದರ ಬೆನ್ನಲ್ಲೇ ಪುಲ್ವಾಮಾ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾದರು.

ಭೂಪೇಂದ್ರ ಮತ್ತು ಮೀನಾಕ್ಷಿ ಅವರು ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಪುಲ್ವಾಮಾ ಉಗ್ರರ ದಾಳಿಯ ಬಳಿಕ ಪತ್ನಿ ಮೀನಾಕ್ಷಿ ಪತಿ ಬಳಿ, ನೀವು ಮತ್ತೆ ಸೇನೆಗೆ ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಯೋಧ ಭೂಪೇಂದ್ರ ಅವರು ರಜೆ ಮುಗಿದ ಬಳಿಕ ಸೇನೆಗೆ ಹೋಗಲು ನಿರ್ಧರಿಸಿದ್ದರು. ಇದರಿಂದ ನೋದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

Comments are closed.