ರಾಷ್ಟ್ರೀಯ

ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತ ಆಡಬಾರದು: ಬಿಸಿಸಿಐಗೆ ಮನವಿ

Pinterest LinkedIn Tumblr


ನವದೆಹಲಿ: ಪುಲ್ವಾಮದಲ್ಲಿ ಮೂರು ದಿನಗಳ ಹಿಂದೆ 40 ಸಿಆರ್​ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಉಗ್ರಗಾಮಿಗಳಿಗೆ ಪಾಕಿಸ್ತಾನವೇ ಕುಮ್ಮಕ್ಕು ಕೊಡುತ್ತಿರುವ ಹಿನ್ನೆಲೆಯಲ್ಲಿ ಆ ದೇಶದೊಂದಿಗೆ ಕ್ರಿಕೆಟ್ ಸಂಬಂಧವನ್ನೂ ಕಡಿದುಕೊಳ್ಳಬೇಕೆಂಬ ಕೂಗುಗಳು ಕೇಳಿಬರುತ್ತಿವೆ. ಮುಂಬರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದೊಂದಿಗೆ ಭಾರತ ತಂಡ ಕ್ರಿಕೆಟ್ ಆಡಬಾರದು ಎಂದು ಬಿಸಿಸಿಐಗೆ ಭಾರತೀಯ ಕ್ರಿಕೆಟ್ ಕ್ಲಬ್​ನ (ಸಿಸಿಐ) ಕಾರ್ಯದರ್ಶಿ ಸುರೇಶ್ ಬಾಫ್ನಾ ಮನವಿ ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಪುಲ್ವಾಮ ಘಟನೆಯ ಬಗ್ಗೆ ಬಹಿರಂಗವಾಗಿ ಏನೂ ಖಂಡನೆ ವ್ಯಕ್ತಪಡಿಸದೇ ಇರುವುದನ್ನು ನೋಡಿದರೆ ಘಟನೆಯಲ್ಲಿ ಆ ದೇಶದ ಪಾತ್ರ ಇರುವ ಸಂಶಯ ಬರುತ್ತದೆ ಎಂದು ಸುರೇಶ್ ಬಾಫ್ನ ಶಂಕಿಸಿದ್ದಾರೆ.

“ಇಮ್ರಾನ್ ಖಾನ್ ಅವರು ಸ್ಪಂದಿಸಬೇಕು. ಅವರೊಬ್ಬ ಪ್ರಧಾನಿ. ದಾಳಿಯಲ್ಲಿ ಪಾಕ್​ನ ಪಾತ್ರ ಇಲ್ಲವೆಂದಿದ್ದರೆ ಅವರು ಬಹಿರಂಗವಾಗಿ ಹೇಳಿಕೆ ಕೊಡಬಹುದಿತ್ತು. ಯಾಕೆ ಹಾಗೆ ಮಾಡುತ್ತಿಲ್ಲ? ಜನರಿಗೆ ಸತ್ಯ ಗೊತ್ತಾಗಬೇಕಿದೆ. ಅವರು ಮಾತನಾಡದೇ ಇರುವುದನ್ನು ನೋಡಿದರೆ ಅವರ ಕೈಗೆ ರಕ್ತದ ಅಂಟಿಕೊಂಡಂತಿದೆ,” ಎಂದು ಸುರೇಶ್ ಬಾಫ್ನ ಟೀಕಿಸಿದ್ದಾರೆ.

ಪುಲ್ವಾಮ ಘಟನೆಯಾದ ಬಳಿಕ ಮುಂಬೈನ ಸಿಸಿಐ ಮುಖ್ಯಕಚೇರಿಯಲ್ಲಿರುವ ಇಮ್ರಾನ್ ಖಾನ್ ಅವರ ಫೋಟೋವನ್ನು ಪ್ರತಿಭಟನಾ ಸೂಚಕವಾಗಿ ಮುಚ್ಚಲಾಗಿತ್ತು. ಈ ಫೋಟೋವನ್ನು ಕಟ್ಟಡದಿಂದಲೇ ತೆಗೆದುಹಾಕುವ ಕುರಿತೂ ಚಿಂತನೆ ನಡೆದಿದೆ.

ವಿಶ್ವಕಪ್ ಯಾವಾಗ?

ಇಂಗ್ಲೆಂಡ್ ಮತ್ತು ವೇಲ್ಸ್ ದೇಶಗಳಲ್ಲಿ ಮೇ 30ರಿಂದ ಜುಲೈ 14ರವರೆಗೆ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಒಟ್ಟು 10 ರಾಷ್ಟ್ರಗಳು ಹಣಾಹಣಿ ನಡೆಸಲಿರುವ ಈ ಟೂರ್ನಿಯ ಗ್ರೂಪ್ ಸ್ಟೇಜ್ ಪಂದ್ಯಗಳು ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯಲಿವೆ. ಅಂದರೆ, ಪ್ರತಿಯೊಂದು ತಂಡವು ಇತರ ತಂಡಗಳನ್ನು ಒಮ್ಮೊಮ್ಮೆ ಎದುರಿಸಲಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಮ್ಯಾಂಚೆಸ್ಟರ್​ನಲ್ಲಿ ಮೇ 16ರಂದು ನಡೆಯಲಿದೆ. ಈ ಪಂದ್ಯವನ್ನು ಆಡದೇ ಇರಲು ಭಾರತ ನಿರ್ಧರಿಸಿದರೆ, ಪಾಕಿಸ್ತಾನಕ್ಕೆ ಗೆಲುವಿನ ಅಂಕ ಹೋಗುವ ಸಾಧ್ಯತೆ ಇರುತ್ತದೆ.

ಪುಲ್ವಾಮ ಉಗ್ರ ದಾಳಿ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲೂ ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಆಡಬಾರದು ಎಂಬ ಒತ್ತಾಯಗಳು ಬರುತ್ತಿವೆ. ಭಾರತದ ಸೈನಿಕರನ್ನ ಪಾಕಿಸ್ತಾನೀಯರು ಸಾಯಿಸುತ್ತಿರುವಾಗ ಆ ದೇಶದೊಂದಿಗೆ ಕ್ರಿಕೆಟ್ ಆಡುವುದರಲ್ಲಿ ಅರ್ಥವೇನಿದೆ ಎಂದು ಪ್ರಶ್ನಿಸಲಾಗುತ್ತಿದೆ. ಆದರೆ, ಬಿಸಿಸಿಐ ಇನ್ನೂ ಈ ಬಗ್ಗೆ ಯಾವುದೇ ನಿಲುವು ತಳೆದಿಲ್ಲ. ಮುಂಬರಲಿರುವ ಬೆಳವಣಿಗೆಗಳ ಆಧಾರದ ಮೇಲೆ ಬಿಸಿಸಿಐ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

Comments are closed.