ಕರ್ನಾಟಕ

ಲೋಕಸಭಾ ಚುನಾವಣೆ: ಮೂವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ನಿರ್ಧಾರ

Pinterest LinkedIn Tumblr


ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಸಕಲ ರೀತಿಯಲ್ಲಿ ಸಜ್ಜು ನಡೆಸುತ್ತಿದೆ. ಸಮರದಲ್ಲಿ ಗೆಲುವು ಸಾಧಿಸಲು ಹೊಸ ರಣತಂತ್ರ ರೂಪಿಸಲು ಮುಂದಾಗಿದೆ. ಕಾಂಗ್ರೆಸ್​ ಪಕ್ಷಕ್ಕೆ ಮತ್ತೆ ಮೂರು ಕಾರ್ಯಾಧ್ಯಕ್ಷರನ್ನು ನೇಮಕ ಮಾಡಲು ನಿರ್ಧರಿಸಿದೆ.

ಈ ಹಿಂದೆ ಕಾಂಗ್ರೆಸ್​ ಪಕ್ಷದಲ್ಲಿ ದಿನೇಶ್​ ಗುಂಡೂರಾವ್ ಹಾಗೂ ಎಸ್​.ಆರ್​.ಪಾಟೀಲ್​ ಕಾರ್ಯಾಧ್ಯಕ್ಷರಾಗಿದ್ದರು. ದಿನೇಶ್​ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಎಸ್​.ಆರ್​.ಪಾಟೀಲ್​ ಹಾಗೂ ಈಶ್ವರ್​ ಖಂಡ್ರೆ ಇಬ್ಬರನ್ನು ಕಾರ್ಯಾಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗಿತ್ತು. ಆದರೆ ಎಸ್​.ಆರ್​. ಪಾಟೀಲ್​ ಅವರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲಿನ ಕಾರಣ ನೀಡಿ ರಾಜೀನಾಮೆ ನೀಡಿದ್ದರು. ಇವರ ರಾಜೀನಾಮೆ ಬಳಿಕ ಒಬ್ಬರಿಗೆ ಸ್ಥಾನ ನೀಡಲಾಗಿತ್ತು. ಸದ್ಯ ಕಾಂಗ್ರೆಸ್​ ಪಕ್ಷದ ಕಾರ್ಯಾಧ್ಯಕ್ಷರಾಗಿ ಈಶ್ವರ್​ ಖಂಡ್ರೆ ಒಬ್ಬರೇ ಇದ್ದಾರೆ.

ಹೀಗಾಗಿ ಕಾಂಗ್ರೆಸ್​ ಪಕ್ಷದಲ್ಲಿ ಒಟ್ಟು 4 ಕಾರ್ಯಾಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್​ ನಿರ್ಧರಿಸಿದೆ. ಭರ್ತಿಯಾಗಿರುವ ಒಂದನ್ನು ಹೊರತುಪಡಿಸಿ ಇನ್ನುಳಿದ ಮೂವರು ಕಾರ್ಯಾಧ್ಯಕ್ಷರ ನೇಮಕಕ್ಕೆ ಚಿಂತನೆ ನಡೆಸಿದೆ.

ಎಸ್​ಸಿ ಎಸ್​ಟಿ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್​ ಹೆಚ್​.ಎಸ್​.ಮಹದೇವಪ್ಪನವರಿಗೆ ಒಂದು ಕಾರ್ಯಾಧ್ಯಕ್ಷ ಸ್ಥಾನ ನೀಡಲು ತೀರ್ಮಾನ ಮಾಡಿದೆ. ಆ ಮೂಲಕ ಹೆಚ್ಚು ಎಸ್​ಸಿ ಎಸ್​​ಟಿ ಮತಗಳನ್ನು ಪಡೆಯಲು ರಣತಂತ್ರ ನಡೆಸಿದೆ. ಮತ್ತೊಂದು ಹುದ್ದೆಯನ್ನು ಒಕ್ಕಲಿಗರಿಗೆ ನೀಡುವಂತೆ ಒತ್ತಾಯವಿದೆ ಎನ್ನಲಾಗಿದೆ. ಇನ್ನೊಂದು ಸ್ಥಾನ ಲಿಂಗಾಯತರಿಗೆ ಬೇಕಿದೆ. ಆದರೆ ಈಗಾಗಲೇ ಲಿಂಗಾಯತ ಈಶ್ವರ್​ ಖಂಡ್ರೆಗೆ ಸ್ಥಾನ ನೀಡಿರುವ ಹಿನ್ನೆಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರನ್ನು ನೇಮಿಸಲು ನಿರ್ಧರಿಸಿದೆ. ಅದರೆ ಯಾರೆಂಬುದು ಇನ್ನೂ ಖಚಿತವಾಗಿಲ್ಲ.

ಒಕ್ಕಲಿಗರು, ಲಿಂಗಾಯತರು ಹಾಗೂ ಎಸ್​ಸಿ, ಎಸ್​ಟಿ ಸಮುದಾಯಗಳನ್ನು ಸೆಳೆಯಲು ಕಾಂಗ್ರೆಸ್​ ಮಾಸ್ಟರ್​ ಪ್ಲಾನ್​ ನಡೆಸಿದೆ. ಚುನಾವಣೆಯಲ್ಲಿ ಮೂವರೂ ಕಾರ್ಯಾಧ್ಯಕ್ಷರಿಗೂ ಪ್ರತ್ಯೇಕ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ.

Comments are closed.