ರಾಷ್ಟ್ರೀಯ

ಅಸ್ಸಾಂ ಮತ್ತೊಂದು ಕಾಶ್ಮೀರ ಆಗಲು ಬಿಡುವುದಿಲ್ಲ: ಅಮಿತ್ ಶಾ

Pinterest LinkedIn Tumblr


ಲಖೀಮ್​ಪುರ್, ಅಸ್ಸಾಮ್: ದೇಶದ ಭದ್ರತೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಯೋಧರ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು. ಅಸ್ಸಾಮ್​ನ ಈ ನಗರದಲ್ಲಿ ಇವತ್ತು ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪುಲ್ವಾಮದಲ್ಲಿ 40 ಸಿಆರ್​ಪಿಎಫ್ ಸೈನಿಕರನ್ನು ಉಗ್ರರು ಬಲಿತೆಗೆದುಕೊಂಡ ಘಟನೆ ಬಗ್ಗೆ ಕಠಿಣ ಪದಗಳಲ್ಲಿ ಖಂಡಿಸಿದರು.

“ಪಾಕಿಸ್ತಾನೀ ಭಯೋತ್ಪಾದಕರ ಹೇಡಿತನದ ಕೃತ್ಯ ಇದು. ಭಾರತೀಯ ಸೈನಿಕರ ಬಲಿದಾನ ವ್ಯರ್ಥವಾಗಲು ಕೇಂದ್ರದಲ್ಲಿರುವುದು ಕಾಂಗ್ರೆಸ್ ಸರಕಾರವಲ್ಲ. ಬಿಜೆಪಿ ಸರಕಾರವು ದೇಶದ ಭದ್ರತೆ ವಿಚಾರದಲ್ಲಿ ಯಾವುದೇ ಮುಲಾಜು ನೋಡುವುದಿಲ್ಲ” ಎಂದು ಅಮಿತ್ ಶಾ ಹೇಳಿದರು.

ಅಸ್ಸಾಮ್​ನ ಭಾರತೀಯ ಪೌರತ್ವ ನೊಂದಣಿಯ(ಎನ್​ಆರ್​ಸಿ) ವಿಚಾರಕ್ಕೆ ಬಂದ ಅಮಿತ್ ಶಾ, ಅಸ್ಸಾಮ್ ರಾಜ್ಯವನ್ನು ಮತ್ತೊಂದು ಕಾಶ್ಮೀರ ಆಗಲು ಬಿಡುವುದಿಲ್ಲ ಎಂದು ಪಣತೊಟ್ಟರು.

“ಅಸ್ಸಾಮನ್ನು ಮತ್ತೊಂದು ಕಾಶ್ಮೀರ ಆಗಲು ಬಿಡುವುದಿಲ್ಲ. ಅದಕ್ಕಾಗಿಯೇ ಎನ್​ಆರ್​ಸಿ ತಂದಿದ್ದೇವೆ. ಈ ನೊಂದಣಿ ಪಟ್ಟಿಯ ನೆರವಿನಿಂದ ಪ್ರತಿಯೊಬ್ಬ ನುಸುಳುಕೋರನನ್ನೂ ಹೊರಗೆ ಕಳುಹಿಸುತ್ತೇವೆ” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷರು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಮತ್ತು ಅಸಾಮ್ ಗಣ ಪರಿಷದ್ (ಎಜಿಪಿ) ಪಕ್ಷಗಳನ್ನ ಅಮಿತ್ ಶಾ ಈ ವೇಳೆ ತರಾಟೆಗೆ ತೆಗೆದುಕೊಂಡರು. ಈ ಎರಡು ಪಕ್ಷಗಳು ಸುದೀರ್ಘ ಕಾಲ ಅಧಿಕಾರದಲ್ಲಿದ್ದರೂ 1985ರ ಅಸ್ಸಾಮ್ ಒಪ್ಪಂದವನ್ನು ಜಾರಿ ತರಲು ವಿಫಲವಾಗಿವೆ ಎಂದು ಶಾ ಟೀಕಿಸಿದರು.

ಏನಿದು ಅಸ್ಸಾಮ್ ಒಪ್ಪಂದ?
ಅಸ್ಸಾಮ್​ನಲ್ಲಿ ಅಕ್ರಮ ವಲಸಿಗರ ಸಂಖ್ಯೆ, ಅದರಲ್ಲೂ ಬಾಂಗ್ಲಾದೇಶೀ(ಆಗಿನ ಪೂರ್ವ ಬಂಗಾಳ) ಪ್ರಜೆಗಳ ವಲಸೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ 70ರ ದಶಕದಲ್ಲೇ ಆ ರಾಜ್ಯದಲ್ಲಿ ಹೋರಾಟ ಹುಟ್ಟಿಕೊಂಡಿತ್ತು. ತತ್​ಫಲವಾಗಿ 1985ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರು ಅಸ್ಸಾಮ್ ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದದ ಪ್ರಕಾರ 1966ರ ಜನವರಿ 1ಕ್ಕಿಂತ ಮುಂಚೆ ಅಸ್ಸಾಮ್​ನಲ್ಲಿ ನೆಲಸಿದ್ದವರೆಲ್ಲರಿಗೂ ಅಲ್ಲಿಯ ಪೌರತ್ವ ಸಿಗಬೇಕೆಂಬುದು ಒಂದು ಅಂಶ. 1966ರಿಂದ 1971ರ ಮಾರ್ಚ್ 24ರ ಅವಧಿಯಲ್ಲಿ ಅಸ್ಸಾಮ್​ಗೆ ಬಂದು ನೆಲಸಿದವರನ್ನು ಗುರುತಿಸಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ 10 ವರ್ಷಗಳ ಕಾಲ ಹೊರತೆಗೆಯುವುದು ಇನ್ನೊಂದು ಅಂಶ. ಅದಕ್ಕಿಂತ ಮುಖ್ಯವಾಗಿ 1971ರ ಮಾರ್ಚ್ 24ರ ನಂತರ ಭಾರತದ ಗಡಿ ಭಾಗಕ್ಕೆ ನುಸುಳಿದವರನ್ನು ದೇಶದಿಂದಲೇ ಹೊರಹಾಕಬೇಕು ಎಂಬುದು ಈ ಒಪ್ಪಂದದ ಪ್ರಮುಖ ಅಂಶವಾಗಿತ್ತು.

ಕಾಂಗ್ರೆಸ್ ಸರಕಾರ ಈ ಒಪ್ಪಂದಕ್ಕೆ ಸಹಿಹಾಕಿದಾಗ ಅಸ್ಸಾಮ್​ನಲ್ಲಿ ವಲಸಿಗ ವಿರೋಧಿ ಹೋರಾಟ ತಾತ್ಕಾಲಿಕವಾಗಿ ನಿಂತಿತ್ತು. ಆದರೆ, ಮೂರು ದಶಕವಾದರೂ ಒಪ್ಪಂದದ ಅನುಷ್ಠಾನವಾಗಿಲ್ಲ. ಇದರಿಂದ ಈ ಈಶಾನ್ಯ ರಾಜ್ಯದಲ್ಲಿ ಪದೇ ಪದೇ ಪ್ರತಿಭಟನೆ, ಹೋರಾಟಗಳು ನಡೆಯುತ್ತಲೇ ಇವೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್​ಆರ್​ಸಿ ಮೂಲಕ 1985ರ ಅಸ್ಸಾಮ್ ಒಪ್ಪಂದವನ್ನು ಜಾರಿಗೆ ತರಲು ಯತ್ನಿಸುತ್ತಿದ್ದೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಕಾಂಗ್ರೆಸ್, ಟಿಎಂಸಿ, ಎಜಿಪಿ ಮೊದಲಾದ ಪಕ್ಷಗಳು ಈ ಎನ್​ಆರ್​ಸಿಯನ್ನು ಬಲವಾಗಿ ವಿರೋಧಿಸುತ್ತಿವೆ. ಎನ್​ಆರ್​ಸಿ ನೆಪದಲ್ಲಿ ಅಮಾಯಕ ಮುಸ್ಲಿಮರನ್ನು ಮತ್ತು ಬಂಗಾಳಿಗಳನ್ನು ಗುರಿ ಮಾಡಲಾಗುತ್ತಿದೆ ಎಂಬುದು ಈ ಪಕ್ಷಗಳ ಪ್ರಮುಖ ಆರೋಪವಾಗಿದೆ.

ಕೇಂದ್ರ ಸರಕಾರ ಜಾರಿಗೆ ತರಲು ಯತ್ನಿಸುತ್ತಿರುವ ಪೌರತ್ವ ತಿದ್ದುಪಡಿ ವಿಧೇಯಕ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲು ವಿಫಲವಾಗಿದೆ. ಈ ವಿಧೇಯಕವು ಅಸ್ಸಾಮ್ ಹಾಗೂ ಈಶಾನ್ಯ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ತಪ್ಪು ಅಭಿಪ್ರಾಯಗಳನ್ನು ಹರಡಲಾಗುತ್ತಿದೆ ಎಂದು ಅಮಿತ್ ಶಾ ಈ ವೇಳೆ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡರು.

ಈಶಾನ್ಯ ಭಾಗವಷ್ಟೇ ಅಲ್ಲ, ಇಡೀ ದೇಶದಿಂದಲೇ ಅಕ್ರಮ ವಲಸಿಗರನ್ನು ಹೊರಗಟ್ಟಲಾಗುವುದು. ಅಸ್ಸಾಮ್​ನಲ್ಲಿ ಜನಸಂಖ್ಯೆಯ ಪರಿಮಾಣದಲ್ಲಿ ಆಗುತ್ತಿರುವ ಬದಲಾವಣೆಗಳನ್ನ ಗಮನಿಸಿದರೆ ಪೌರತ್ವ ಕಾನೂನು ತಿದ್ದುಪಡಿ ಆಗದಿದ್ದರೆ ಈ ರಾಜ್ಯದ ನಿವಾಸಿಗಳಿಗೆ ಅಪಾಯ ಸ್ಥಿತಿ ಕಾದಿದೆ ಎಂದು ಅಮಿತ್ ಶಾ ಆತಂಕ ವ್ಯಕ್ತಪಡಿಸಿದರು.

Comments are closed.