ರಾಷ್ಟ್ರೀಯ

ಅಂತಾರಾಷ್ಟ್ರೀಯ ಕೋರ್ಟ್​ನಲ್ಲಿ ಇಂದಿನಿಂದ ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾಧವ್ ವಿಚಾರಣೆ

Pinterest LinkedIn Tumblr


ನವದೆಹಲಿ: ಪಾಕಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿರುವ ಆರೋಪದ ಮೇಲೆ ಅಲ್ಲಿ ಕೋರ್ಟ್​ನಿಂದ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತದ ಮಾಜಿ ನೌಕಾ ಪಡೆ ಅಧಿಕಾರಿ ಕುಲಭೂಷಣ್ ಜಾಧವ್ ಅವರ ವಿಚಾರಣೆಯನ್ನು ಅಂತಾರಾಷ್ಟ್ರೀಯ ಕೋರ್ಟ್ ಸೋಮವಾರ ಕೈಗೆತ್ತಿಕೊಳ್ಳಲಿದೆ. ಪುಲ್ವಾಮ ಉಗ್ರ ದಾಳಿಯಲ್ಲಿ ತನ್ನದೇನೂ ಕೈವಾಡ ಇಲ್ಲ ಎಂದು ಹೇಳಿರುವ ಪಾಕಿಸ್ತಾನವು ಇವತ್ತು ಕುಲಭೂಷಣ್ ವಿಚಾರದ ಬಗ್ಗೆ ಮಾತನಾಡಿ ಭಾರತವನ್ನು ಟೀಕೆ ಮಾಡಿದೆ. ಪಾಕಿಸ್ತಾನದಲ್ಲಿ ಹಿಂಸಾಚಾರಗಳಿಗೆ ಪ್ರಚೋದನೆ ಮಾಡಿರುವುದಾಗಿ ಸ್ವತಃ ಕುಲಭೂಷಣ್ ಅವರೇ ಒಪ್ಪಿಕೊಂಡರೂ ಭಾರತ ಒಪ್ಪಿಕೊಳ್ಳುತ್ತಿಲ್ಲ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಕಾರ್ಯಾಲಯವು ಇವತ್ತು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ರಹಸ್ಯ ಮಿಲಿಟರಿ ಕೋರ್ಟ್​ನಲ್ಲಿ ನಡೆದ ವಿಚಾರಣೆ ವೇಳೆ ಕುಲಭೂಷಣ್ ಅವರು ತಾವು ಅಪರಾಧ ಎಸಗಿರುವುದನ್ನು ಒಪ್ಪಿಕೊಂಡಿರುವುದು ಸಾಬೀತಾಗಿತ್ತು. ಆ ನ್ಯಾಯಾಲಯವು ಕುಲಭೂಷಣ್​ಗೆ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಆದರೆ, ಭಾರತವು ಈ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಕುಲಭೂಷಣ್ ಜಾಧವ್ ಅವರು ತಮ್ಮ ನೌಕಾಪಡೆ ಅಧಿಕಾರಿಯಾದರೂ ಸೇವೆಯಿಂದ ನಿವೃತ್ತರಾಗಿದ್ದರು. ಅಲ್ಲದೇ, ಯಾವುದೋ ವೈಯಕ್ತಿಕ ವ್ಯವಹಾರದ ನಿಮಿತ್ತ ಅವರು ಇರಾನ್​ಗೆ ಹೋಗಿದ್ದಾಗ ಪಾಕಿಸ್ತಾನವು ಪಿತೂರಿ ನಡೆಸಿ ಅವರನ್ನು ಅಪಹರಿಸಿದೆ ಎಂಬುದು ಭಾರತದ ವಾದ. ಅಂತೆಯೇ, ಕುಲಭೂಷಣ್ ಜಾಧವ್ ಅವರ ವಿಚಾರಣೆ ಪಾರದರ್ಶಕವಾಗಿರಲಿಲ್ಲ. ರಹಸ್ಯವಾಗಿ ವಿಚಾರಣೆಯ ನಾಟಕ ಮಾಡಿದೆ ಎಂಬುದು ಭಾರತದ ಆರೋಪ. ಹೀಗಾಗಿ, ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಗಿ ಜಾಧವ್​ಗೆ ನೀಡಿದ್ದ ಮರಣದಂಡನೆ ತೀರ್ಪಿಗೆ ತಡೆ ತಂದಿದೆ. ನೆದರ್​ಲೆಂಡ್ಸ್ ದೇಶದ ಹೇಗ್ ನಗರದಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್ ನಾಳೆಯಿಂದ ಕುಲಭೂಷಣ್ ಜಾಧವ್ ಪ್ರಕರಣದ ವಿಚಾರಣೆ ನಡೆಸಲಿದೆ.

ಒಂದು ವೇಳೆ, ಈ ಪ್ರಕರಣದಲ್ಲಿ ಭಾರತಕ್ಕೆ ಜಯ ಸಿಕ್ಕರೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯವಾಗಿ ಭಾರೀ ಮುಖಭಂಗವಾಗಲಿದೆ. ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸುವ ಭಾರತದ ಪ್ರಯತ್ನಕ್ಕೆ ಇನ್ನಷ್ಟು ಪುಷ್ಟಿ ಸಿಗಲಿದೆ.

Comments are closed.