ಅಂತರಾಷ್ಟ್ರೀಯ

ಪುಲ್ವಾಮಾ ಮಾದರಿಯಲ್ಲೇ ಪಾಕ್ ಸೈನಿಕರ ಮೇಲೆ ಆತ್ಮಾಹುತಿ ದಾಳಿ: 9 ಸಾವು

Pinterest LinkedIn Tumblr


ನವದೆಹಲಿ: ಕಾಶ್ಮೀರದ ಪುಲ್ವಾಮದಲ್ಲಿ ಉಗ್ರಗಾಮಿ ಆತ್ಮಾಹುತಿ ದಾಳಿ ನಡೆಸಿ 40 ಭಾರತೀಯ ಯೋಧರನ್ನು ಬಲಿತೆಗೆದುಕೊಂಡ ರೀತಿಯಲ್ಲೇ ಪಾಕಿಸ್ತಾನದಲ್ಲೂ ಅಲ್ಲಿಯ ಪ್ರತ್ಯೇಕತಾವಾದಿಗಳು ಪಾಕ್ ಸೇನೆಯನ್ನು ಹತ್ಯೆಗೈದಿದ್ದಾರೆ. ಬಲೂಚಿಸ್ತಾನದ ತರ್ಬತ್ ಮತ್ತು ಪಂಜ್​ಗುರ್ ಮಧ್ಯೆ ಪಾಕಿಸ್ತಾನ ಸೇನೆಯ ವಾಹನಗಳ ಮೇಲೆ ಆತ್ಮಾಹುತಿ ದಾಳಿಯಾಗಿದ್ದು 9ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ. 11 ಮಂದಿಗೆ ಗಾಯಗಳಾಗಿವೆ ಎಂದು ಬಲೂಚಿಸ್ತಾನ್ ಪೋಸ್ಟ್ ಪತ್ರಿಕೆ ವರದಿ ಮಾಡಿದೆ. ಬಲೂಚಿಸ್ತಾನ್ ಲಿಬರೇಷನ್ ಫ್ರಂಟ್ ಮತ್ತು ಬಲೂಚ್ ರಿಪಬ್ಲಿಕನ್ ಗಾರ್ಡ್ಸ್ ಸಂಘಟನೆಗಳು ಈ ದಾಳಿಯ ಹೊಣೆ ಹೊತ್ತುಕೊಂಡಿರುವುದು ತಿಳಿದುಬಂದಿದೆ.

ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಪಾಕಿಸ್ತಾನಕ್ಕೆ ಆಗಮಿಸುವ ಕೆಲ ಹೊತ್ತಿನ ಮೊದಲು ಈ ದುರ್ಘಟನೆ ನಡೆದಿದೆ.

ಪುಲ್ವಾಮದಲ್ಲಿ ಭೀಕರ ಉಗ್ರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂದು ಭಾರತ ಬಲವಾಗಿ ಆರೋಪಿಸುತ್ತಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಘಟನೆ ಬಗ್ಗೆ ಚಕಾರ ಎತ್ತದೇ ಇರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಪುಲ್ವಾಮ ಘಟನೆಯಲ್ಲಿ ಪಾಕಿಸ್ತಾನದ ಪಾತ್ರ ಇರುವುದಕ್ಕೆ ಇದು ಪುರಾವೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಚೀನಾವನ್ನೂ ಒಳಗೊಂಡಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಪುಲ್ವಾಮ ದಾಳಿಯನ್ನು ಖಂಡಿಸಿವೆ. ಭಾರತವು ಪಾಕಿಸ್ತಾವನ್ನು ವಿಶ್ವಮಟ್ಟದಲ್ಲಿ ಏಕಾಂಗಿಯಾಗಿಸಲು ಪಣ ತೊಟ್ಟಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿದ್ದು, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ನಿನ್ನೆ ಇರಾನ್​ಗೆ ಭೇಟಿ ನೀಡಿ ಪಾಕಿಸ್ತಾನದ ಕುಕೃತ್ಯಗಳನ್ನು ಬೆಳಕಿಗೆ ತರಲು ಯತ್ನಿಸಿದ್ದಾರೆ.

ಇತ್ತ, ಪಾಕಿಸ್ತಾನದಲ್ಲಿ ಉಗ್ರರ ಗುಂಪುಗಳು ತುಂಬಿ ತುಳುಕುತ್ತಿದ್ದು, ಆಫ್ಘಾನಿಸ್ತಾನದಲ್ಲಿ ಕೆಲ ಪಾಕ್ ಉಗ್ರ ಗುಂಪುಗಳು ಸಕ್ರಿಯವಾಗಿವೆ. ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಬೆಂಬಲ ಕೊಡುತ್ತಿದೆ ಎನ್ನಲಾದ ಪಾಕಿಸ್ತಾನಕ್ಕೂ ಪ್ರತ್ಯೇಕತಾವಾದಿಗಳ ಬಾಧೆ ಮೊದಲಿಂದಲೂ ಇದೆ. ಬಲೂಚಿಸ್ತಾನದ ಜನರು ಪಾಕಿಸ್ತಾನದಿಂದ ಬೇರ್ಪಟ್ಟು ಹೊಸ ರಾಷ್ಟ್ರ ಕಟ್ಟಲು ಹೋರಾಡುತ್ತಿದ್ದಾರೆ. ಅದಕ್ಕೆ ಭಾರತ ಸರಕಾರದ ನೆರವಿಗೂ ಅವರು ಪ್ರಯತ್ನಿಸುತ್ತಿದ್ದಾರೆ. ಆದರೆ, ಬಲೂಚಿಸ್ತಾನವು ಪಾಕಿಸ್ತಾನದ ಆಂತರಿಕ ವಿಚಾರವಾದ್ದರಿಂದ ಭಾರತ ಅದರಲ್ಲಿ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಅನುಸರಿಸುತ್ತಿದೆ. ಈಗ ಪುಲ್ವಾಮ ದಾಳಿಯ ನಂತರ ಸುಬ್ರಮಣಿಯನ್ ಸ್ವಾಮಿ ಅವರಂತಹ ಕೆಲ ನಾಯಕರು ಬಲೂಚಿಸ್ತಾನದ ಪ್ರತ್ಯೇಕತಾ ಹೋರಾಟಕ್ಕೆ ಭಾರತ ಬೆಂಬಲ ನೀಡಬೇಕು ಎಂಬ ಸಲಹೆಗಳನ್ನು ನೀಡಿದ್ದಾರೆ.

Comments are closed.