ರಾಷ್ಟ್ರೀಯ

3 ಕ್ಷೇತ್ರದಲ್ಲಿ ಜಯ ಗಳಿಸಿದವರಿಗೆ ಅಧಿಕಾರ: ಇದೆಂಥಾ ಪ್ರಜಾಪ್ರಭುತ್ವ? ಕೇಜ್ರಿವಾಲ್

Pinterest LinkedIn Tumblr


ನವದೆಹಲಿ: ದಿಲ್ಲಿಯ ಆಡಳಿತದ ವಿಚಾರಗಳಲ್ಲಿ ರಾಜ್ಯ ಸರಕಾರಕ್ಕಿಂತ ಲೆಫ್ಟಿನೆಂಟ್ ರಾಜ್ಯಪಾಲರಿಗೆ ಹೆಚ್ಚು ಅಧಿಕಾರ ಇದೆ ಎಂದು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ಸಿಎಂ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 67 ಕ್ಷೇತ್ರ ಗೆದ್ದವರಿಗಿಂತ 3 ಸ್ಥಾನ ಗೆದ್ದವರಿಗೆ ಹೆಚ್ಚು ಅಧಿಕಾರ ಸಿಗುತ್ತದೆ ಎಂದರೆ ಏನರ್ಥ? ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸಂವಿಧಾನವಿರೋಧಿ ಮತ್ತು ಪ್ರಜಾಪ್ರಭುತ್ವವಿರೋಧಿ ಎಂದು ಕೇಜ್ರಿವಾಲ್ ಬಣ್ಣಿಸಿದ್ದಾರೆ. ದೆಹಲಿಯಲ್ಲಿ 3 ಸ್ಥಾನ ಗೆದ್ದಿರುವ ಬಿಜೆಪಿಯವರು ಲೆಫ್ಟಿನೆಂಟ್ ಗವರ್ನರ್ ಮೂಲಕ ಆಡಳಿತ ನಡೆಸುವಂತಾಗಿದೆ ಎಂದು ಕೇಜ್ರಿವಾಲ್ ವಿಷಾದಿಸಿದ್ದಾರೆ. ಇದೇ ವೇಳೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ದಿಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

“ಸುಪ್ರೀಂ ಕೋರ್ಟ್ ಬಗ್ಗೆ ನಮಗೆ ಗೌರವ ಇದೆ. ಆದರೆ, ಅದು ನೀಡಿದ ತೀರ್ಪಿನಿಂದ ಜನರಿಗೆ ಅನ್ಯಾಯವಾಗಿದೆ. ರಾಜ್ಯ ಸರಕಾರಕ್ಕೆ ಒಂದು ಮೊಹಲ್ಲಾ ಕ್ಲಿನಿಕ್ ಕೂಡ ತೆರೆಯಲು ಸಾಧ್ಯವಿಲ್ಲವೆಂದರೆ ಇದೆಂಥಾ ಪ್ರಜಾಪ್ರಭುತ್ವ? ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಚುನಾಯಿತ ಸರಕಾರವು ಲೆಫ್ಟಿನೆಂಟ್ ಗವರ್ನರ್ ಅವರ ಕಚೇರಿಯಲ್ಲಿ ಧರಣಿ ನಡೆಸಬೇಕೆಂದರೆ ದಿಲ್ಲಿಯ ಅಭಿವೃದ್ಧಿ ಹೇಗೆ ತಾನೇ ಸಾಧ್ಯ? ಒಂದು ಸರಕಾರ ತನ್ನ ಅಧಿಕಾರಿಗಳನ್ನ ವರ್ಗಾವಣೆ ಮಾಡಲು ಆಗದಿದ್ದರೆ ಅದು ಕೆಲಸ ಮಾಡುವುದಾದರೂ ಹೇಗೆ? ಅಧಿಕಾರಿಗಳು ಹೇಳಿದ ಮಾತು ಕೇಳದಿದ್ದರೆ ಸರಕಾರ ನಡೆಯುತ್ತಾ?” ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಯಾಗಿ ಜನತೆಯು ಆಮ್ ಆದ್ಮಿ ಪಕ್ಷದ ಪರವಾಗಿ ನಿಲ್ಲಬೇಕು. ಲೋಕಸಭೆ ಚುನಾವಣೆಯಲ್ಲಿ ದಿಲ್ಲಿಯ ಎಲ್ಲಾ ಏಳು ಸ್ಥಾನಗಳಲ್ಲೂ ಆಮ್ ಆದ್ಮಿ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು. ಆಗ ಆ ಏಳು ಸಂಸದರ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ತಂದು ಕೆಲಸ ಮಾಡಿಸಿಕೊಳ್ಳಬಹುದು ಎಂದು ದಿಲ್ಲಿಯ ಜನರಲ್ಲಿ ಕೇಜ್ರಿವಾಲ್ ಮತ ಯಾಚಿಸಿದ್ಧಾರೆ.

ಸುಪ್ರೀಂ ತೀರ್ಪು ಏನು?

ದಿಲ್ಲಿ ಆಡಳಿತದಲ್ಲಿ ಅಲ್ಲಿಯ ಸರಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡಿದೆ. ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ ತನಿಖೆಗಳ ಅಧಿಕಾರವು ದಿಲ್ಲಿ ಲೆಫ್ಟಿನೆಂಟ್ ರಾಜ್ಯಪಾಲರ ಕೈಯಲ್ಲೇ ಇರಲಿದೆ. ಹಾಗೆಯೇ, ಕೇಜ್ರಿವಾಲ್ ಸರಕಾರ ಬಲವಾಗಿ ಒತ್ತಾಯಿಸುತ್ತಿರುವ ಪೊಲೀಸ್ ಇಲಾಖೆಯ ನಿಯಂತ್ರಣ ಕೂಡ ಎಲ್​ಜಿ ಅವರ ಬಳಿಯೇ ಇರಲಿದೆ. ವಿವಿಧ ಇಲಾಖೆಗಳ ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಉನ್ನತ ಹುದ್ದೆಯ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಅಧಿಕಾರವೂ ಎಲ್​ಜಿ ಅವರ ಬಳಿಯೇ ಇರಬೇಕು ಎಂದು ನ್ಯಾ| ಎ.ಕೆ. ಸಿಕ್ರಿ ಮತ್ತು ನ್ಯಾ| ಅಶೋಕ್ ಭೂಷಣ್ ಅವರಿರುವ ದ್ವಿಸದಸ್ಯ ಪೀಠವು ಅಭಿಪ್ರಾಯಪಟ್ಟಿತು.

ಇಬ್ಬರೂ ನ್ಯಾಯಮೂರ್ತಿಗಳು ಬಹುತೇಕ ಒಂದೇ ಅಭಿಪ್ರಾಯಕ್ಕೆ ಬಂದರಾದರೂ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇವತ್ತು ಆರು ವಿಚಾರಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಅದರಲ್ಲಿ ನಾಲ್ಕು ಎಲ್​ಜಿ ಪರವಾಗಿದ್ದರೆ, ಇನ್ನೆರಡು ದಿಲ್ಲಿ ಸರಕಾರದ ಪರವಾಗಿವೆ. ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಗ್ರೇಡ್ 1 ಮತ್ತು 2 ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆ, ಕಮಿಷನ್ ಆಫ್ ಇನ್​ಕ್ವೈರಿ ಇವು ಎಲ್​ಜಿ ಮೂಲಕ ಕೇಂದ್ರ ಸರಕಾರದ ನಿಯಂತ್ರಣದಲ್ಲೇ ಇರಲಿವೆ ಎಂದು ಸುಪ್ರೀಂ ನ್ಯಾಯಪೀಠ ತೀರ್ಮಾನಕ್ಕೆ ಬಂದಿತು.

ವಿದ್ಯುತ್ ಸುಧಾರಣೆ ಕಾಯ್ದೆಯ ಅಧಿಕಾರವನ್ನು ದಿಲ್ಲಿ ಸರಕಾರಕ್ಕೆ ನೀಡಲಾಗಿದೆ. ಕೃಷಿ ಭೂಮಿಯ ಕನಿಷ್ಠ ದರದ ಪರಿಷ್ಕರಣೆಯ ಅಧಿಕಾರವು ದಿಲ್ಲಿ ಸರಕಾರಕ್ಕೆ ಇದೆಯಾದರೂ ಎಲ್​ಜಿ ಅವರು ಅಗತ್ಯಬಿದ್ದಲ್ಲಿ ರಾಷ್ಟ್ರಪತಿಗಳ ಗಮನಕ್ಕೆ ತರುವ ಅಧಿಕಾರ ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿಗಳು ಹೇಳಿದರು.

ಆದರೆ, ಸೇವೆಗಳ ವಿಚಾರದಲ್ಲಿ ಇಬ್ಬರು ನ್ಯಾಯಮೂರ್ತಿಗಳು ತದ್ವಿರುದ್ಧ ತೀರ್ಪು ನೀಡಿದ್ದಾರೆ. ನ್ಯಾ| ಎಕೆ ಸಿಕ್ರಿ ಅವರು ಕೇಂದ್ರ ಸರಕಾರದ ಪರ ತೀರ್ಪು ಕೊಟ್ಟರೆ, ನ್ಯಾ| ಅಶೋಕ್ ಭೂಷಣ್ ಅವರು ದಿಲ್ಲಿ ಸರಕಾರಕ್ಕೆ ಅಧಿಕಾರ ಇರಬೇಕೆಂದು ಹೇಳಿದರು. ಈ ಒಂದು ವಿಚಾರದಲ್ಲಿ ದ್ವಿಸದಸ್ಯ ನ್ಯಾಯಪೀಠವು ಒಮ್ಮತಕ್ಕೆ ಬರಲಾಗಲಿಲ್ಲ. ಹೀಗಾಗಿ, ಸರ್ವಿಸ್ ಅಧಿಕಾರ ಯಾರಿಗೆ ಸಿಗಬೇಕೆಂಬುದನ್ನು ತ್ರಿದಸ್ಯ ಪೀಠವೊಂದು ನಿರ್ಧರಿಸಲಿದೆ.

Comments are closed.