ರಾಷ್ಟ್ರೀಯ

ರಾಮ ಮಂದಿರ ಕುರಿತು ಎಸ್ಪಿ, ಬಿಎಸ್ಪಿ ನಿಲುವು ಸ್ಪಷ್ಟಪಡಿಸಲಿ: ಅಮಿತ್‌ ಶಾ

Pinterest LinkedIn Tumblr


ಹೊಸದಿಲ್ಲಿ : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧವಾಗಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಬಹುಜನ ಸಮಾಜ ಪಕ್ಷಗಳು (ಬಿಎಸ್ಪಿ) ಧೈರ್ಯವಿದ್ದರೆ ತಮ್ಮ ನಿಲುವು ಸ್ಪಷ್ಟಪಡಿಸಲಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸವಾಲು ಹಾಕಿದ್ದಾರೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಬಿಜೆಪಿ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ”ಅಯೋಧ್ಯೆಯಲ್ಲಿ ವಿವಾದಿತ ಸ್ಥಳದ ಸುತ್ತಲೂ ಇರುವ ಅವಿವಾದಿತ ಭೂಮಿಯನ್ನು ವಾಪಸ್‌ ನೀಡುವುದಾಗಿ ನರೇಂದ್ರ ಮೋದಿ ಅವರ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದೆ. ಮಸೀದಿ ಇದ್ದ ಸ್ಥಳದಲ್ಲೇ ರಾಮ ಮಂದಿರ ನಿರ್ಮಾಣ ಮಾಡಲು ನಾವು ಬಯಸುತ್ತಿದ್ದೇವೆ ಮತ್ತು ಅದಕ್ಕೆ ಬದ್ಧರಾಗಿದ್ದೇವೆ” ಎಂದು ಹೇಳಿದರು.

ಅಕ್ರಮ ವಲಸಿಗರೇ ಮತ ಬ್ಯಾಂಕ್‌: ”2019ರ ಲೋಕಸಭೆ ಚುನಾವಣೆ ಬಳಿಕ ಮೋದಿ ಸರಕಾರ ಒಬ್ಬನೇ ಒಬ್ಬ ಅಕ್ರಮ ವಲಸಿಗ ದೇಶದಲ್ಲಿ ಇರದಂತೆ ನೋಡಿಕೊಳ್ಳಲಿದೆ. ಅಕ್ರಮ ವಲಸಿಗರು ಎಸ್ಪಿ ಮತ್ತು ಬಿಎಸ್ಪಿಗೆ ಮತಬ್ಯಾಂಕ್‌ ಇರಬಹುದು. ಆದರೆ, ಇದು ದೇಶದ ಭದ್ರತೆಯ ಪ್ರಶ್ನೆ”ಎಂದರು.

”ಮೋದಿ ಸರಕಾರ ಅಸ್ಸಾಂನಲ್ಲಿ ‘ರಾಷ್ಟ್ರೀಯ ಪೌರತ್ವ ನೋಂದಣಿ’ಯನ್ನು ಅನುಷ್ಠಾನಗೊಳಿಸುತ್ತಿದೆ. ಅಕ್ರಮ ನುಸುಳುಕೋರರನ್ನು ಹೊರಗೋಡಿಸುವುದು ಇದರ ಹಿಂದಿನ ಉದ್ದೇಶ. ಆದರೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಇತರೆ ಪ್ರತಿಪಕ್ಷಗಳ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ, ಅಕ್ರಮ ವಲಸಿಗರನ್ನು ಹೊರಗಟ್ಟುವುದು ಬೇಡವೇ?” ಎಂದು ಶಾ ಕಾರ್ಯಕರ್ತರನ್ನು ಪ್ರಶ್ನಿಸಿದರು.

ಬಿಜೆಪಿ ವರ್ಸಸ್‌ ಇತರರ ಹೋರಾಟ

ಮುಂಬರುವ ಲೋಕಸಭಾ ಚುನಾವಣೆಯು ನರೇಂದ್ರ ಮೋದಿ ವರ್ಸಸ್‌ ಉಳಿದೆಲ್ಲಾ ಪ್ರತಿಪಕ್ಷಗಳ ನಡುವಿನ ನೇರ ಕಾಳಗವಾಗಲಿದೆ ಎಂದು ಶಾ ಬಣ್ಣಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಬಗ್ಗೆ ವ್ಯಂಗ್ಯವಾಡಿದ ಅವರು, ”ಅಲಿಗಢ ಬೀಗಗಳು ತುಂಬಾ ಜನಪ್ರಿಯ. ಜನರು ಅಂಗಡಿಗಳಿಗೆ ಅಲಿಗಢ ಬೀಗಗಳನ್ನು ಬಳಸಿ ಮುಚ್ಚುತ್ತಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಎಸ್ಪಿ ಮತ್ತು ಬಿಎಸ್ಪಿಗೆ ಬೀಗ ಜಡಿಯಲಿದ್ದಾರೆ” ಎಂದು ಶಾ ಅಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಹುರಿದುಂಬಿಸಿದರು.

ರಾಹುಲ್‌ ವಿರುದ್ಧ ಕಿಡಿ: ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾದ, ರೈತರಿಗೆ ವಾರ್ಷಿಕ 6,000 ರೂ. ನಗದು ವರ್ಗಾವಣೆ ಮಾಡುವ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ ಬಗ್ಗೆ ಟೀಕಿಸುತ್ತಿರುವ ರಾಹುಲ್‌ ಗಾಂಧಿ ಅವರನ್ನೂ ಶಾ ತರಾಟೆಗೆ ತೆಗೆದುಕೊಂಡರು. ”ಹಿಂದಿನ ಯುಪಿಎ ಸರಕಾರ, 53,000 ಕೋಟಿ ರೂ.ಗಳನ್ನು ಸಾಲ ಮನ್ನಾ ರೂಪದಲ್ಲಿ ರೈತರಿಗೆ ನೀಡಿತ್ತು. ಆದರೆ ಮೋದಿ ಸರಕಾರ ರೈತರಿಗೆ 75,000 ಕೋಟಿ ರೂ.ಗಳನ್ನು ವಾರ್ಷಿಕ ಆದಾಯದ ರೂಪದಲ್ಲಿ ನೀಡುತ್ತಿದೆ” ಎಂದು ಶಾ ಹೋಲಿಸಿದರು.

ಬುಲಂದ್‌ಶೆಹರ್‌ನಲ್ಲೂ ರ‍್ಯಾಲಿ: ಇದಕ್ಕೂ ಮುನ್ನ ಅಮಿತ್‌ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಇತ್ತೀಚೆಗೆ ಹಿಂಸಾಚಾರದಿಂದ ಸುದ್ದಿಯಾಗಿದ್ದ ಬುಲಂದ್‌ಶಹರ್‌ನಲ್ಲೂ ರ‍್ಯಾಲಿ ನಡೆಸಿದರು. ಇಲ್ಲಿ ಜಿಲ್ಲಾ ಬಿಜೆಪಿ ಕಚೇರಿಯನ್ನೂ ಶಾ ಉದ್ಘಾಟಿಸಿದರು.

Comments are closed.