ರಾಷ್ಟ್ರೀಯ

ನನ್ನ ಕುಟುಂಬಕ್ಕೆ ನಾನು ಬೆಂಬಲ ನೀಡುತ್ತೇನೆ: ರಾಜಕೀಯ ವಿರೋಧಿಗಳಿಗೆ ಪ್ರಿಯಾಂಕಾ ಸ್ಪಷ್ಟ ಸಂದೇಶ

Pinterest LinkedIn Tumblr


ಹೊಸದಿಲ್ಲಿ: ಇಡಿ ಕಚೇರಿಗೆ ರಾಬರ್ಟ್ ವಾದ್ರಾ ವಿಚಾರಣೆಗೆ ಹಾಜರಾದ ವೇಳೆ ಅವರನ್ನು ಡ್ರಾಪ್‌ ಮಾಡಲು ಪತ್ನಿ ಪ್ರಿಯಾಂಕಾ ಗಾಂಧಿ ಸಹ ಆಗಮಿಸಿದ್ದರು. ಇದು ಅವರ ರಾಜಕೀಯ ವಿರೋಧಿಗಳಿಗೆ ಪ್ರಿಯಾಂಕಾ ಗಾಂಧಿ ನೀಡುತ್ತಿರುವ ಸ್ಪಷ್ಟ ಸಂದೇಶವೆಂದೇ ಪರಿಗಣಿಸಲಾಗಿದೆ.

ಅಕ್ರಮ ಹಣ ವರ್ಗಾವಣೆ ಕೇಸ್‌ ಹಾಗೂ ವಿದೇಶಿ ಸ್ವತ್ತುಗಳನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ರಾಬರ್ಟ್ ವಾದ್ರಾರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಹಾಜರಾಗುವಂತೆ ವಾದ್ರಾಗೆ ಸೂಚಿಸಿತ್ತು. ಇನ್ನು, ಕಾಂಗ್ರೆಸ್‌ ಮುಖ್ಯ ಕಚೇರಿಗೆ ಆಗಮಿಸಿದ್ದ ಪ್ರಿಯಾಂಕಾ ಗಾಂಧಿ, ”ಅವರು ನನ್ನ ಪತಿ, ನನ್ನ ಕುಟುಂಬ. ಹೀಗಾಗಿ, ನನ್ನ ಕುಟುಂಬಕ್ಕೆ ನಾನು ಸದಾ ಬೆಂಬಲ ನೀಡುತ್ತೇನೆ” ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗಾಂಧಿ ಅಧಿಕಾರ ಸ್ವೀಕರಿಸಿದ್ರು.

ತನ್ನ ಪತಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ ಎಂದು ಪ್ರಶ್ನೆ ಮಾಡಿದ್ದಕ್ಕೆ ಪ್ರಿಯಾಂಕಾ ಗಾಂಧಿ ಈ ಪ್ರತಿಕ್ರಿಯೆ ನೀಡಿದ್ರು. ಅಲ್ಲದೆ, ಇದು ದ್ವೇಷದ ರಾಜಕಾರಣವೇ ಎಂದು ಕೇಳಿದ್ದಕ್ಕೆ ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು ಎಂದು ಪ್ರಿಯಾಂಕಾ ವಾದ್ರಾ ತಿಳಿಸಿದ್ದಾರೆ.

2008 – 09 ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ವಾದ್ರಾ 8 – 9 ಆಸ್ತಿಯನ್ನು ಲಂಡನ್‌ನಲ್ಲಿ ಖರೀದಿಸಿದ್ದಾರೆ. ಅಲ್ಲದೆ, ಕಿಕ್‌ಬ್ಯಾಕ್‌ನಿಂದ ಬಂದ ಹಣದಿಂದ ಆಸ್ತಿ, ಸ್ವತ್ತುಗಳನ್ನು ಖರೀದಿ ಮಾಡಲಾಗಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ಮಧ್ಯ ದಿಲ್ಲಿಯ ಜಾಮ್‌ನಗರ ಹೌಸ್‌ನಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಪತ್ನಿ ಪ್ರಿಯಾಂಕಾ ಗಾಂಧಿರೊಂದಿಗೆ ಎಸ್‌ಪಿಜಿ ಭದ್ರತೆಯೊಂದಿಗೆ ರಾಬರ್ಟ್ ವಾದ್ರಾ ಆಗಮಿಸಿದ್ದರು. ಬಿಳಿ ಟೊಯೋಟಾ ಲ್ಯಾಂಡ್‌ ಕ್ರೂಸರ್ ಕಾರಿನಲ್ಲಿ ಬಂದಿದ್ದ ಪ್ರಿಯಾಂಕಾ ಗಾಂಧಿ, ತನ್ನ ಪತಿಯನ್ನು ಕಚೇರಿಯ ಹೊರಗೆ ಬಿಟ್ಟ ತಕ್ಷಣ ಭದ್ರತಾ ವಾಹನಗಳೊಂದಿಗೆ ವಾಪಸ್ ತೆರಳಿದ್ದರು

ಫೆಬ್ರವರಿ 6, ಮಧ್ಯಾಹ್ನ ಸುಮಾರು 3.47ರ ಸಮಯದಲ್ಲಿ ವಾದ್ರಾ ಇಡಿ ಕಚೇರಿಗೆ ಎಂಟ್ರಿ ಕೊಟ್ಟಿದ್ದು, ಅವರ ಪರ ವಕೀಲರು ಅವರಿಗೂ ಮುನ್ನವೇ ಕಚೇರಿಗೆ ಬಂದಿದ್ದರು. ಸದ್ಯ, ವಾದ್ರಾ ಹೇಳಿಕೆಗಳನ್ನು ಇಡಿ ಕಚೇರಿಯಲ್ಲಿ ದಾಖಲಿಸಿಕೊಂಡಿದ್ದರು.

Comments are closed.