ರಾಷ್ಟ್ರೀಯ

ಬಿಜೆಪಿ ಸೇರಿದ ಮಮತಾ ಬ್ಯಾನರ್ಜಿ ಪರಮಾಪ್ತೆ

Pinterest LinkedIn Tumblr


ಕೋಲ್ಕತಾ : ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ದೀದಿ ಸಾಮ್ರಾಜ್ಯ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಇನ್ನಷ್ಟು ಬಲ ಬಂದಂತಾಗಿದೆ. ಮಾಜಿ ಐಪಿಎಸ್ ಅಧಿಕಾರಿ ಹಾಗೂ ಮಮತಾ ಬ್ಯಾನರ್ಜಿ ಆಪ್ತೆ ಭಾರತಿ ಘೋಷ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಹಿರಿಯ ಮುಖಂಡ ಕೈಲಾಸ್ ವರ್ಗಿಯಾ ನೇತೃತ್ವದಲ್ಲಿ ದಿಲ್ಲಿಯ ಕಚೇರಿಯಲ್ಲಿ ಫೆಬ್ರವರಿ 4ರಂದು ಪಕ್ಷ ಸೇರಿದ್ದಾರೆ.

ಈ ಹಿಂದೆಯೇ ರಾಜಕೀಯಕ್ಕೆ ಪ್ರವೇಶಿಸಿ ಟಿಎಂಸಿ ಸರ್ಕಾರದ ವಿರುದ್ಧ ತಮ್ಮ ಪ್ರತಿಕಾರವನ್ನು ತೀರಿಸಿಕೊಳ್ಳಲು ಭಾರತಿ ಬಯಸಿದ್ದರು. ಇದೀಗ ಅಧಿಕೃತವಾಗಿ ರಾಜಕಾರಣಕ್ಕೆ ಪ್ರವೇಶ ಮಾಡಿದ್ದಾರೆ.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಭಾರತಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟಿಎಂಸಿ ಸರ್ಕಾರದಲ್ಲಿ ಮಾತು ಕೇಳುವ ಅಧಿಕಾರಿಗಳಿಗೆ ಮಾತ್ರವೇ ಬೆಲೆ. ಅವರ ಹೇಳಿಕೆ ನಡೆಗೆ ತಿರುಗಿ ಬಿದ್ದಲ್ಲಿ ಅವರ ಪ್ರತಿಕಾರ ಆರಂಭವಾಗುತ್ತದೆ.

ಸರ್ಕಾರದ ಆಡಳಿತದ ಬಗ್ಗೆ ಪ್ರಶ್ನೆ ಎತ್ತಿದ್ದರಿಂದ ತಮ್ಮ ವಿರುದ್ಧವೇ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಯ್ತು. ಇದೀಗ ಅವರಿಗೆ ಉತ್ತರ ನೀಡುವ ಕಾಲ ಬಂದಿದೆ ಎಂದು ಭಾರತಿ ಘೋಷ್ ಹೇಳಿದ್ದಾರೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕುಟುಂಬ ಬೆಳೆಯುತ್ತಿದೆ. ಮಾಜಿ ಐಪಿಎಸ್ ಅಧಿಕಾರಿಗೆ ನಮ್ಮ ಪಕ್ಷಕ್ಕೆ ಸ್ವಾಗತ ಎಂದು ಬಿಜೆಪಿ ಮುಖಂಡ ಕೈಲಾಶ್ ವರ್ಗಿಯಾ ಟ್ವೀಟ್ ಮಾಡಿದ್ದಾರೆ.

ಮೂಲಗಳ ಪ್ರಕಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತಿ ಘೋಷ್ ಸ್ಪರ್ಧೆ ಮಾಡುವ ಸಾಧ್ಯತೆಯೂ ಕೂಡ ಹೆಚ್ಚಿದೆ.

Comments are closed.