ರಾಷ್ಟ್ರೀಯ

ಅರುಣ್ ಜೇಟ್ಲಿಗೆ ಅನಾರೋಗ್ಯ; ಪಿಯೂಶ್ ಗೋಯೆಲ್ ಅವರಿಂದ ಬಜೆಟ್ ಮಂಡನೆ

Pinterest LinkedIn Tumblr


ನವದೆಹಲಿ: ಅರುಣ್ ಜೇಟ್ಲಿ ಅವರು ಅನಾರೋಗ್ಯಗೊಂಡು ಅಮೆರಿಕದ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಮಂಡನೆಯನ್ನು ರೈಲ್ವೆ ಸಚಿವ ಪಿಯೂಶ್ ಗೋಯಲ್ ಮಾಡಲಿದ್ದಾರೆ. ಅರುಣ್ ಜೇಟ್ಲಿ ಅವರ ಬಳಿ ಇದ್ದ ಹಣಕಾಸು ಖಾತೆ ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆಗಳನ್ನ ಪೀಯುಶ್ ಗೋಯೆಲ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಈ ನಿಟ್ಟಿನಲ್ಲಿ ನಿರ್ದೇಶನ ನೀಡಿರುವುದು ತಿಳಿದುಬಂದಿದೆ.

ಅರುಣ್ ಜೇಟ್ಲಿ ಅವರು ಯಾವುದೇ ಖಾತೆ ಹೊಂದಿಲ್ಲದಿದ್ದರೂ ಮಂತ್ರಿಯಾಗಿಯೇ ಮುಂದುವರಿಯಲಿದ್ದಾರೆ. ಜೇಟ್ಲಿ ಅವರು ಇತ್ತೀಚೆಗಷ್ಟೇ ಕಿಡ್ನಿ ಟ್ರಾನ್ಸ್​ಪ್ಲಾಂಟ್ ಸರ್ಜರಿಗೆ ಒಳಗಾಗಿದ್ದರು. ಈಗ ಮತ್ತೆ ಅದೇ ಸಮಸ್ಯೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಚಿಕಿತ್ಸೆಗೆ ಹೋಗಿದ್ದಾರೆನ್ನಲಾಗಿದೆ. ಆದರೆ, ಕೆಲ ಸುದ್ದಿಗಳ ಪ್ರಕಾರ ಜೇಟ್ಲಿ ಅವರಿಗೆ ಮೃದು ಸ್ನಾಯು ಕ್ಯಾನ್ಸರ್ ಬಂದಿದ್ದರಿಂದ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಜೇಟ್ಲಿ ಕೂಡ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಅರುಣ್ ಜೇಟ್ಲಿ ಅವರು ಸಂಪೂರ್ಣವಾಗಿ ಚೇತರಿಸಿಕೊಂಡು ಕರ್ತವ್ಯಕ್ಕೆ ಅಣಿಗೊಳ್ಳುವವರೆಗೂ ಪೀಯುಶ್ ಅವರೇ ಈ ಎಲ್ಲಾ ಖಾತೆಗಳನ್ನ ನಿಭಾಯಿಸಲಿದ್ದಾರೆ. ಫೆಬ್ರವರಿ 1ರಂದು ಕೇಂದ್ರ ಬಜೆಟನ್ನೂ ಗೋಯೆಲ್ ಅವರೇ ಮಂಡಿಸಲಿದ್ದಾರೆ.

ಫೆಬ್ರವರಿ ಒಂದರಂದು ಮಂಡನೆಯಾಗಲಿರುವ ಬಜೆಟ್ ಮಧ್ಯಂತರ ಬಜೆಟ್ ಆಗಿದ್ದರೂ ಪೂರ್ಣ ಪ್ರಮಾಣದ ಬಜೆಟ್ ರೀತಿಯಲ್ಲೇ ಕೇಂದ್ರವು ಮಂಡನೆ ಮಾಡಲಿರುವುದು ವಿಶೇಷ. ಚುನಾವಣೆಗೆ 3-4 ತಿಂಗಳಷ್ಟೇ ಬಾರಿ ಉಳಿಯುವುದರಿಂದ ಬಹುತೇಕ ಚುನಾವಣಾ ಬಜೆಟ್ ಆಗಿರಲಿದೆ. ಕೊನೆಯ ದಿನಗಳಲ್ಲಿ ಮತದಾರರನ್ನ ಸೆಳೆಯಲು ಕೇಂದ್ರ ಸರಕಾರ ಈ ಬಜೆಟ್ ಮೂಲಕ ಪ್ರಯತ್ನ ಮಾಡುವುದು ನಿಶ್ಚಿತ. ಹೀಗಾಗಿ, ಆರ್ಥಿಕ ಸುಧಾರಣಾ ಕ್ರಮಕ್ಕಿಂತ ಹೆಚ್ಚಾಗಿ ಜನಪ್ರಿಯ ಯೋಜನೆಗಳ ಘೋಷಣೆಯ ನಿರೀಕ್ಷೆ ಈ ಬಜೆಟ್ ನೀಡಿದೆ. ತೆಲಂಗಾಣದಲ್ಲಿರುವ ರೈತ ಬಂಧು ಯೋಜನೆ ಮಾದರಿಯಲ್ಲಿ ಕೇಂದ್ರ ಸರಕಾರವು ರೈತರಿಗೆ ಹಣ ವರ್ಗಾವಣೆ ಮಾಡಲು ಬಜೆಟ್​ನಲ್ಲಿ ಕ್ರಮ ಕೈಗೊಳ್ಳಲಿದೆ. ಹಾಗೆಯೇ, ಸಣ್ಣ ರೈತರಿಗೆ ಬಡ್ಡಿರಹಿತ ಬ್ಯಾಂಕ್ ಸಾಲ ನೀಡುವ ಕುರಿತೂ ಚಿಂತನೆ ನಡೆಸಿದೆ.

Comments are closed.