ರಾಷ್ಟ್ರೀಯ

ಎಲ್ಲ ಬಂಗಾಳಿ ವಲಸಿಗರಿಗೆ ಪೌರತ್ವ: ಅಮಿತ್ ಶಾ

Pinterest LinkedIn Tumblr


ಮಾಲ್ಡಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಚುನಾವಣೆ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಿರುವ ಪಕ್ಷದ ಅಧ್ಯಕ್ಷ ಅಮಿತ್ ಶಾ, ಪೌರತ್ವ ವಿಧೇಯಕ ಅಂಗೀಕಾರವಾದ ಬಳಿಕ ಎಲ್ಲ ಬಂಗಾಲಿ ವಲಸಿಗರಿಗೆ ಪೌರತ್ವ ನೀಡಲಾಗುವುದು ಎಂದು ಘೋಷಿಸಿದರು.

ಮಾಲ್ಡಾದಲ್ಲಿ ಪಕ್ಷದ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಮುಂದಿನ ಲೋಕಸಭಾ ಚುನಾವಣೆ ರಾಜ್ಯದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ ಮಾಡಲಿದೆ ಎಂದರು.

‘ಪೌರತ್ವ ಕಾಯ್ದೆಯಡಿ ಎಲ್ಲ ಬಂಗಾಳಿ ವಲಸಿಗರಿಗೆ ಪೌರತ್ವ ನೀಡಲಾಗುವುದು ಎಂದು ಭರವಸೆ ನೀಡುತ್ತೇನೆ. ಟಿಎಂಸಿ ಸರಕಾರ ನಿರಾಶ್ರಿತರಿಗಾಗಿ ಏನೂ ಮಾಡಿಲ್ಲ. ಆದರೆ ನಾವು ಅವರಿಗೆ ಪೌರತ್ವ ನೀಡುತ್ತೇವೆ’ ಎಂದು ಶಾ ನುಡಿದರು.

ಕೋಲ್ಕೊತದಲ್ಲಿ ನಡೆದ ಪ್ರತಿಪಕ್ಷಗಳ ರ‍್ಯಾಲಿಯನ್ನು ಅಣಕಿಸಿದ ಅಮಿತ್ ಶಾ, ಬಿಜೆಪಿ ವಿರೋಧಿ ಪಕ್ಷಗಳು ತಮ್ಮ ಸಾರ್ವಜನಿಕ ಸಭೆಯಲ್ಲಿ ‘ಭಾರತ್ ಮಾತಾ ಕಿ ಜೈ ಅಥವಾ ವಂದೇ ಮಾತರಂ ಎಂದು ಒಂದು ಬಾರಿಯೂ ಘೋಷಣೆ ಕೂಗಿಲ್ಲ; ಆದರೆ ‘ಮೋದಿ, ಮೋದಿ’ ಎಂದು ಮಾತ್ರ ಕೂಗುತ್ತಿದ್ದರೆಂದು ಶಾ ಟೀಕಿಸಿದರು.

ಪ್ರತಿಪಕ್ಷಗಳ ಮಹಾಘಟಬಂಧನ ಕೇವಲ ಅಧಿಕಾರ ಮತ್ತು ಸ್ವಾರ್ಥ ಹಿತಾಸಕ್ತಿಗಳಿಗಾಗಿ ರಚನೆಯಾಗಿದೆ ಎಂದು ಶಾ ಆರೋಪಿಸಿದರು.

‘ಅಧಿಕಾರ ದಾಹ ಮತ್ತು ದುರಾಸೆಗಳಿಂದ ಮಹಾಘಟಬಂಧನ ರಚನೆಯಾಗಿದೆ. ಅವರಿಗೆ ಮೋದಿ ನಿರ್ಮೂಲನೆ ಮಾತ್ರ ಉದ್ದೇಶ. ಆದರೆ ಬಡತನ ಮತ್ತು ಭ್ರಷ್ಟಾಚಾರದ ನಿರ್ಮೂಲನೆ ನಮ್ಮ ಉದ್ದೇಶ’ ಎಂದು ಶಾ ಟೀಕಿಸಿದರು.

ತೃಣಮೂಲ ಕಾಂಗ್ರೆಸ್ ಆಡಳಿತವನ್ನು ‘ಕೊಲೆಗಡುಕರ ಪರ ಸರಕಾರ’ ಎಂದು ಶಾ ಬಣ್ಣಿಸಿದರು. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಟಿಎಂಸಿ ಸರಕಾರ ಪತನಗೊಳ್ಳಲಿದೆ ಎಂದು ಅವರು ಭವಿಷ್ಯ ನುಡಿದರು.

Comments are closed.