ರಾಷ್ಟ್ರೀಯ

ಕೇರಳದ ಅಗಸ್ತ್ಯರಕೂಡಂ ಬೆಟ್ಟ ಏರಿದ ಏಕೈಕ ಮಹಿಳೆ ಧನ್ಯಾ

Pinterest LinkedIn Tumblr


ತಿರುವನಂತಪುರ: ಮಹಿಳೆಯರಿಗೆ ಅಘೋಷಿತ ನಿರ್ಬಂಧವಿದ್ದ ಕೇರಳದ ಎರಡನೇ ಅತಿ ಎತ್ತರದ ಬೆಟ್ಟ ‘ಅಗಸ್ತ್ಯರಕೂಡಂ’ಅನ್ನು 38 ವರ್ಷದ ಕೆ.ಧನ್ಯಾ ಸಾನಲ್‌ ಏರುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಇವರು ರಕ್ಷಣಾ ಸಚಿವಾಲಯದ ವಕ್ತಾರೆ.

ನೆಯ್ಯಾರ್‌ ವನ್ಯಜೀವಿಧಾಮದಲ್ಲಿ ಬರುವ ಅಗಸ್ತ್ಯರಕೂಡಂ ಬೆಟ್ಟಕ್ಕೆ ಮಹಿಳಾ ಚಾರಣಿಗರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು ಕೇರಳ ಹೈಕೋರ್ಟ್‌ ಕಳೆದ ನವೆಂಬರ್‌ನಲ್ಲಿ ರದ್ದುಗೊಳಿಸಿತ್ತು. ಇದಾದ ಬಳಿಕ ಚಾರಣ ಕೈಗೊಳ್ಳುವವರಿಗೆ ಕೇರಳದ ಅರಣ್ಯ ಇಲಾಖೆ ಐದು ದಿನಗಳ ಹಿಂದಷ್ಟೇ ಆನ್‌ಲೈನ್‌ ನೋಂದಣಿ ಆರಂಭಿಸಿ, ಮಹಿಳೆಯರಿಗೂ ಅವಕಾಶ ನೀಡಿತ್ತು. ಹೀಗೆ ಮೊದಲ ಬ್ಯಾಚ್‌ನಲ್ಲಿ ನೋಂದಣಿ ಮಾಡಿಸಿದ 100 ಚಾರಣಿಗರ ಜತೆಗೆ ಏಕೈಕ ಮಹಿಳೆಯಾಗಿ ಧನ್ಯಾ ಬೆಟ್ಟದ ತುದಿ ಏರಿದ್ದಾರೆ.

ಹೊಸ ಅನುಭವ: ಮೊದಲಿನಿಂದಲೂ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಇದ್ದ ಧನ್ಯಾ ಸನಾಲ್‌ ಅವರಿಗೆ ಇದು ಹೊಸ ಅನುಭವ ನೀಡಿದೆ. ”ಕನಿ ಬುಡಕಟ್ಟು ಜನರ ಪ್ರತಿಭಟನೆಯ ನಡುವೆಯೂ ಬೊನಾಕಾಡ್ವೆ ಅರಣ್ಯದ ಮೂಲಕ 22 ಕಿ.ಮೀ ದುರ್ಗಮ ಹಾದಿ ಸೆವೆಸಿ ಬೆಟ್ಟ ಏರಿದೆವು. 1,868 ಮೀಟರ್‌ ಎತ್ತರದ ಬೆಟ್ಟದ ತುದಿ ತಲುಪಿ ಅಲ್ಲಿಂದ ಕಾಣುವ ನಯನ ಮನೋಹರ ಪ್ರಾಕೃತಿಕ ಸಿರಿಸಂಪತನ್ನು ನೋಡಲು ಬಲುಚೆಂದ. ನಿಜಕ್ಕೂ ಇದೊಂದು ಸ್ಮರಣೀಯ ಘಳಿಗೆ,” ಎಂದು ಧನ್ಯಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜೀವ ವೈವಿಧ್ಯದ ಆಗರವೆನಿಸಿರುವ ಅಗಸ್ತ್ಯರಕೂಡಂ ಯುನೆಸ್ಕೊದ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಾರ್ಚ್‌ 1ರವರೆಗೂ ಟ್ರಕ್ಕಿಂಗ್‌ ನಡೆಯಲಿದೆ.
——
4,700

ಈ ವರ್ಷ ಅಗಸ್ತ್ಯರಕೂಡಂ ಬೆಟ್ಟ ಏರಲು ನೋಂದಣಿ ಮಾಡಿಸಿದ ಚಾರಣಿಗರ ಸಂಖ್ಯೆ. ಇದರಲ್ಲಿ 100 ಮಹಿಳೆಯರು ಎಂಬುದು ವಿಶೇಷ.

Comments are closed.