ರಾಷ್ಟ್ರೀಯ

ಗಿರಿ ತಾಣ ಪೊನ್ನಂಬಲಮೇಡುವಿನಲ್ಲಿ ಅಯ್ಯಪ್ಪನ ಭಕ್ತರಿಗೆ ಮಕರ ಜ್ಯೋತಿ ದರ್ಶನ

Pinterest LinkedIn Tumblr


ಶಬರಿಮಲೆ: ಗಿರಿ ತಾಣ ಪೊನ್ನಂಬಲಮೇಡುವಿನಲ್ಲಿ ಅಯ್ಯಪ್ಪ ಸ್ವಾಮಿಯ ಲಕ್ಷಾಂತರ ಭಕ್ತರು ಸೋಮವಾರ ಸಾಂಪ್ರದಾಯಿಕ ‘ದೀಪಾರಾಧನೆ’ ಬಳಿಕ ಪವಿತ್ರ ‘ಮಕರ ಜ್ಯೋತಿ’ ದರ್ಶನ ಪಡೆದು ಪುನೀತರಾದರು.

ಋುತುಮತಿ ಮಹಿಳೆಯರ ಪ್ರವೇಶ ವಿಷಯದಲ್ಲಿ ಉದ್ಭವಿಸಿದ್ದ ಸಂಘರ್ಷಮಯ ವಾತಾವರಣದ ನಡುವೆಯೂ ಮಕರ ಜ್ಯೋತಿ ದರ್ಶನಕ್ಕಾಗಿ ಶಬರಿಗಿರಿ ಮೇಲೆ ಸೋಮವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ತಲೆಯ ಮೇಲೆ ಇರುಮುಡಿ ಹೊತ್ತು, ಗಂಟೆಗಳ ಕಾಲ ತಾಳ್ಮೆಯಿಂದ ನಿಂತು ಪವಿತ್ರ ಜ್ಯೋತಿಯ ದರ್ಶನ ಪಡೆದು ಹರ್ಷಗೊಂಡರು.

ಸ್ವಾಮಿ ಅಯ್ಯಪ್ಪ ತನ್ನ ಬಾಲ್ಯ ಕಳೆದ ಪ್ರತೀತಿ ಇರುವ ಪಂದಳಂ ಅರಮನೆಯಿಂದ ಜನವರಿ 12ರಂದು ಹೊರಟಿದ್ದ ‘ತಿರುವಾಭರಣಂ ಘೋಷಯಾತ್ರೆ’ ಸೋಮವಾರ ಸಂಜೆ ಶಬರಿಗಿರಿ ತಲುಪಿತು. ಸನ್ನಿಧಾನದಲ್ಲಿ ದೀಪಾರಾಧನೆಯ ವೈಭವ ಅನಾವರಣಗೊಂಡಿತು. ಬಳಿಕ, ಪೊನ್ನಂಬಲಮೇಡು ಗಿರಿಯ ಮೇಲೆ ಗಂಟೆಗಳ ಕಾಲ ಕಾತುರದಿಂದ ಕಾಯ್ದ ನಿಂತ ಲಕ್ಷಾಂತರ ಭಕ್ತರಿಗೆ ಮಕರ ಜ್ಯೋತಿಯ ದರ್ಶನವಾಯಿತು. ಅದಾಗುತ್ತಿದ್ದಂತೆಯೇ ‘ಸ್ವಾಮಿ ಶರಣಂ ಅಯ್ಯಪ್ಪ’ ಎನ್ನುವ ಮಹಾ ಘೋಷಣೆ ಅಲೆ ಮುಗಿಲು ಮುಟ್ಟಿತು. ಜ್ಯೋತಿ ದರ್ಶನದ ಬಳಿಕ ರಾತ್ರಿಯೇ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಭಕ್ತ ಸಾಗರ ಗಿರಿ ಇಳಿದು ತಮ್ಮ ಊರುಗಳತ್ತ ಸಾಗಿತು.

ತ್ವೇಷಮಯ ವಾತಾವರಣ ಇದ್ದಿದ್ದರಿಂದ ಭಾರೀ ಬಿಗಿಭದ್ರತೆ ಏರ್ಪಾಡು ಮಾಡಲಾಗಿತ್ತು. ”ಮಕರವಿಳಕ್ಕು (ಸಂಕ್ರಾಂತಿ) ಕಾರ್ಯಕ್ರಮಗಳು ಶಾಂತಿಯುತವಾಗಿ ಮುಕ್ತಾಯಗೊಂಡಿವೆ,” ಎಂದು ಕೇರಳ ಸರಕಾರ ತಿಳಿಸಿದೆ.

Comments are closed.