ರಾಷ್ಟ್ರೀಯ

ಅಯೋಧ್ಯೆ ಪ್ರಕರಣ ಶೀಘ್ರ ಇತ್ಯರ್ಥ ಬಿಜೆಪಿ ಯತ್ನ; ಕಾಂಗ್ರೆಸ್‌ನಿಂದ ಅಡ್ಡಗಾಲು: ಅಮಿತ್ ಶಾ

Pinterest LinkedIn Tumblr
Lucknow: BJP President Amit Shah 

ಹೊಸದಿಲ್ಲಿ: ಅಯೋಧ್ಯೆ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆಯಾಗುತ್ತಿದೆ. ಆದಷ್ಟು ಬೇಗನೆ ಪ್ರಕರಣ ಮುಕ್ತಾಯವಾಗಬೇಕು ಎಂದು ನಾವು ಬಯಸುತ್ತೇವೆ. ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕೆಂದು ಬಿಜೆಪಿ ಬಯಸುತ್ತದೆ. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್‌ ಪ್ರಕರಣವನ್ನು ಮತ್ತಷ್ಟು ವಿಳಂಬಿಸಲು ಪ್ರಯತ್ನಿಸುತ್ತಿದ್ದಾರೆ. ಸಂವಿಧಾನದ ಮಾರ್ಗದಲ್ಲಿ ರಾಮ ಮಂದಿರ ನಿರ್ಮಾಣವನ್ನು ನಾವು ಬಯಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಘೋಷಿಸಿದರು.

ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಶುಕ್ರವಾರ ಅಪರಾಹ್ನ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಉದ್ದೇಶಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ರಾಹುಲ್ ಗಾಂಧಿ ಮೋದಿ ಸರಕಾರದ ವಿರುದ್ಧ ಆಧಾರ ರಹಿತ ಲಂಚದ ಆರೋಪ ಮಾಡುತ್ತಾರೆ ಎಂದು ಶಾ ಕಿಡಿ ಕಾರಿದರು. ದೇಶದ ಜನತೆ ರಾಹುಲ್‌ಗಿಂತ ಬುದ್ಧಿವಂತರು ಎಂದೂ ಅವರು ನುಡಿದರು.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರಕಾರ ದೇಶದ ಮಹಿಳೆಯರಿಗೆ ಘನತೆಯೊಂದಿಗೆ ಬದುಕುವ ಹಕ್ಕನ್ನು ನೀಡಿದೆ. ಅದಕ್ಕಾಗಿ 90 ಲಕ್ಷ ಶೌಚಾಲಯಗಳನ್ನೂ ನಿರ್ಮಿಸಲಾಗಿದೆ ಎಂದು ಶಾ ನುಡಿದರು.

2014ರ ವರೆಗೂ ದೇಶದಲ್ಲಿ ಒಟ್ಟು 60 ಸಾವಿರ ಕುಟುಂಬಗಳಿಗೆ ಬ್ಯಾಂಕ್ ಖಾತೆಗಳೇ ಇರಲಿಲ್ಲ. ಆದರೆ ಮೋದೀಜಿ ಈ ಎಲ್ಲ ಕುಟುಂಬಗಳಿಗೆ ಜನಧನ್ ಯೋಜನೆಯಡಿ ಬ್ಯಾಂಕ್ ಖಾತೆಗಳನ್ನು ಒದಗಿಸಿದರು.

‘ಒಂದು ಶ್ರೇಣಿ, ಒಂದು ಪಿಂಚಣಿ’ ಯೋಜನೆಯಡಿ ದೇಶ ಕಾಯುವ ವೀರ ಯೋಧರಿಗೆ ನರೇಂದ್ರ ಮೋದಿ ಸರಕಾರ ಗೌರ ಸಲ್ಲಿಸಿದೆ. ದೇಶದ ಭದ್ರತೆಗಾಗಿ ಮೋದಿ ಸರಕಾರ ಕಠಿಣ ಪರಿಶ್ರಮ ವಹಿಸಿದೆ ಎಂದು ಬಿಜೆಪಿ ಅಧ್ಯಕ್ಷರು ನುಡಿದರು.

ಬಡವರ ಅಭಿವೃದ್ಧಿಗಾಗಿ ನಾವು ಬಹಳಷ್ಟು ಕೆಲಸಗಳನ್ನು ಮಾಡಿದ್ದೇವೆ. ದೇಶದ ಭದ್ರತೆಯೂ ಅಷ್ಟೇ ಮುಖ್ಯವಾಗಿದೆ. 2014ರ ಮೊದಲು ನಮ್ಮ ಯೋಧರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಪ್ರತಿದಿನ ಉಗ್ರರು ದೇಶದೊಳಕ್ಕೆ ನುಸುಳಿ ಬರುತ್ತಿದ್ದರು. ಈ ಪರಿಸ್ಥಿತಿಗಳನ್ನು ನಾವು ನಿಯಂತ್ರಿಸಿದ್ದೇವೆ ಎಂದು ಶಾ ಹೇಳಿದರು.

2014ರಲ್ಲಿ ಬಿಜೆಪಿ ಕೇವಲ 6 ರಾಜ್ಯಗಳಲ್ಲಿ ಅಧಿಕಾರದಲ್ಲಿತ್ತು. 2019ರ ವೇಳೆಗೆ ಬಿಜೆಪಿ 16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ: ಅಮಿತ್ ಶಾ.

ಪರಸ್ಪರ ಎದುರಿಸಲಾಗದ, ಸೋಲಿನ ಭೀತಿಯಿರುವ ಜನರು ಇಂದು ಒಟ್ಟಾಗುತ್ತಿದ್ದಾರೆ. ಒಂಟಿಯಾಗಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ಅರಿವಾಗಿದೆ. ಲೋಕಸಭೆ ಚುನಾವನೆ ಎರಡು ಸಿದ್ಧಾಂತಗಳ ನಡುವಣ ಹೋರಾಟವಾಗಲಿದೆ. ಬಿಜೆಪಿ ಸಾಂಸ್ಕೃತಿಕ ರಾಷ್ಟ್ರೀಯತೆ ಮತ್ತು ಬಡವರ ಅಭಿವೃದ್ಧಿಯ ಸಂಕೇತವಾದರೆ, ಎದುರಾಳಿಗಳು ಕೇವಲ ಅಧಿಕಾರಕ್ಕಾಗಿ ಒಟ್ಟಾಗಿದ್ದಾರೆ ಎಂದು ಅಮಿತ್ ಶಾ ಕುಟುಕಿದರು.

ಉತ್ತರ ಪ್ರದೇಶದಲ್ಲಿ 74 ಸ್ಥಾನಗಳನ್ನೂ ನಾವು ಗೆಲ್ಲಲಿದ್ದೇವೆ. ನರೇಂದ್ರ ಮೋದಿ ಅವರನ್ನು ಸೋಲಿಸುವುದು ಅಸಾಧ್ಯ ಎಂದು ಶಾ ಸಾರಿದರು.

2019ರ ಚುನಾವಣೆ ಭಾರತದ ಬಡವರ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಸ್ಟಾರ್ಟಪ್‌ಗಳನ್ನು ಆರಂಭಿಸುವ ಯುವಕರಿಗೂ ಇದು ಮಹತ್ವದ ಚುನಾವಣೆ. ಭಾರತ ವೈಭವದಿಂದ ಬೆಳಗಬೇಕು ಎಂದು ಬಯಸುವ ಕೋಟ್ಯಂತರ ಮಂದಿಗೆ ಈ ಚುನಾವಣೆ ಮುಖ್ಯವಾಗಿದೆ: ಅಮಿತ್ ಶಾ

2019ರ ಚುನಾವಣೆ ಮೋದಿ ವರ್ಸಸ್ ಇತರರ ನಡುವೆ ನಡೆಯಲಿದೆ. 2019ರ ಚುನಾವಣಾ ಸಮರ ಶತಮಾನಗಳ ಕಾಲ ಭಾರತದ ಮೇಲೆ ಪ್ರಭಾವ ಬೀರುವಂಥದ್ದಾಗಲಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಗೆಲ್ಲುವುದು ಅತ್ಯಂತ ಪ್ರಮುಖ: ಅಮಿತ್ ಶಾ.

ಜನಸಂಘದ ದಿನಗಳಿಂದಲೂ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಕೀಯದಲ್ಲಿ ಧ್ರುವ ನಕ್ಷತ್ರದಂತೆ ಬೆಳಗಿದರು. ಬಿಜೆಪಿಯ ಸಂಸ್ಥಾಪಕ ಅಧ್ಯಕ್ಷರಾಗಿ ಪಕ್ಷವನ್ನು ಸದೃಢವಾಗಿ ಬೆಳೆಸಿದರು. ವಾಜಪೇಯಿ ಮತ್ತು ಆಡ್ವಾಣಿ ಅವರಷ್ಟು ಕಠಿಣ ಪರಿಶ್ರಮವನ್ನು ಯಾರೂ ಮಾಡಿರಲಿಲ್ಲ ಎಂದು ನನ್ನ ಭಾವನೆ. ಅವರ ಪರಿಶ್ರಮದಿಂದ ಬಿಜೆಪಿ ಇಂದು ದೇಶದ ಮೂಲೆ ಮೂಲೆಗೂ ಹಬ್ಬಿದೆ ಎಂದು ಅಮಿತ್ ಶಾ ಹೇಳಿದರು.

Comments are closed.